ಕೊಟ್ಟೂರು: ಕಳೆದ 17 ವರ್ಷಗಳಿಂದ ಚಿರಬಿ ಮೂಗಬಸವೇಶ್ವರ ಸ್ವಾಮಿ ರಥೋತ್ಸವ ರದ್ದಾಗಿದ್ದು, ಈ ಕುರಿತು ಮಾಹಿತಿ ಪಡೆಯಲು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಡಿಸಿ ಕಚೇರಿಯಲ್ಲಿ ಬುಧವಾರ ಸಭೆ ಕರೆದಿದ್ದರು ಎಂದು ಗ್ರಾಮದ ಪ್ರಮುಖ ಡಾ.ಬಿ.ಸಿ.ಮೂಗಪ್ಪ ತಿಳಿಸಿದರು.
ಮೂಗಬಸವೇಶ್ವರ ಸ್ವಾಮಿ ದೇವಾಲಯ ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ಸೇರಿದೆ. ಹೀಗಾಗಿ ಸರ್ಕಾರೇತರ ವ್ಯಕ್ತಿಗಳು ಹಕ್ಕು ಮತ್ತು ಅಧಿಕಾರ ಸಾಧಿಸಲು ಬರುವುದಿಲ್ಲ. ಆದರೆ, ಈ ಕುರಿತು ರಾಂಪುರ ಮತ್ತು ಚಿರಬಿ ಗ್ರಾಮಸ್ಥರು ಕೋರ್ಟ್ ಮೆಟ್ಟಿಲೇರಿರುವುದರಿಂದ ನಾವು ಮಧ್ಯ ಪ್ರವೇಶಿಸಲು ಆಗಲ್ಲ. ಈ ಸಭೆಗೆ ರಾಂಪುರ ಗ್ರಾಮಸ್ಥರು ಗೈರಾಗಿದ್ದು, ಅವರ ಅಭಿಪ್ರಾಯ ಪಡೆದು ಮುಂದೇನು ಮಾಡಬೇಕು ಎಂದು ನಿರ್ಧರಿಸಲಾಗುವುದು ಎಂದು ಧಾರ್ಮಿಕ ಮತ್ತು ದತ್ತಿ ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ ಸಭೆಯಲ್ಲಿ ತಿಳಿಸಿದರು ಎಂದು ಮೂಗಪ್ಪ ಹೇಳಿದರು.