ಕೊಟ್ಟೂರು: ಪಟ್ಟಣದ ಸಾರ್ವಜನಿಕ ಗ್ರಂಥಾಲಯ ಕಟ್ಟಡ ಶಿಥಿಲಗೊಂಡಿದ್ದು, ಛಾವಣಿಯ ಕಾಂಕ್ರೀಟ್ ಉದುರುತ್ತಿದ್ದು, ಮಳೆ ಬಂದರೆ ಸೋರುವುದರಿಂದ ಪುಸ್ತಕ ಪ್ರೇಮಿಗಳು ಭಯದಲ್ಲೆ ವಾಚನಕ್ಕೆ ತೆರಳುವಂತಾಗಿದೆ.
ಗ್ರಂಥಾಲಯ ಕಟ್ಟಡವನ್ನು 2002ರಲ್ಲಿ ನಿರ್ಮಾಣ ಮಾಡಲಾಗಿತ್ತು. 23 ವರ್ಷಗಳ ಹಳೆಯ ಕಟ್ಟಡ ಇದಾಗಿದ್ದು, ಮಳೆ ಬಂದಾಗ ಸೋರುವುದರಿಂದ ಅಮೂಲ್ಯ ಗ್ರಂಥಗಳು ಹಾಳಾಗುತ್ತಿವೆ. ಇದು ಜಿಲ್ಲೆಯಲ್ಲೇ ಅಧಿಕ ಸದಸ್ಯರನ್ನು ಒಳಗೊಂಡಿದ್ದು, ಸದ್ಯ 2,688 ಓದುಗರಿದ್ದಾರೆ. ಈ ಪೈಕಿ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಗತ್ಯ ಪುಸ್ತಕಗಳನ್ನು ಓದುವವರ ಸಂಖ್ಯೆ ಅಧಿಕವಾಗಿದೆ. ಆದರೆ, ಕುಳಿತುಕೊಂಡು ಓದಲು ಅಂಜುವ ಸ್ಥಿತಿ ನಿರ್ಮಾಣವಾಗಿದೆ. ಇತ್ತೀಚಿಗೆ ನಡೆದ ಶಿಕ್ಷಕರ ಆಯ್ಕೆಗಾಗಿ ಪರೀಕ್ಷೆಯಲ್ಲಿ 9 ಜನ ಉತ್ತೀರ್ಣರಾಗಿ, ಶಿಕ್ಷಕರಾಗಿ ಆಯ್ಕೆಯಾಗಿದ್ದಾರೆ. ಇವರೆಲ್ಲ ಈ ಗ್ರಂಥಾಲಯದ ಪುಸ್ತಕಗಳನ್ನು ಓದಿದವರು ಎಂಬುದು ಹೆಗ್ಗಳಿಕೆ.
ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಇತರೆ ಓದುಗರರು ಸೇರಿ ಗ್ರಂಥಾಲಯಕ್ಕೆ ಪ್ರತಿ ದಿನ 200 ಓದುಗರರು ಬರುತ್ತಾರೆ. ಓದುವ ಸಂದರ್ಭದಲಿ ್ಲ ಛಾವಣಿಯ ಕಾಂಕ್ರೀಟ್ ಉದುರಿದರೆ ಅಪಾಯ ಸಂಭವಿಸುವ ಸಾಧ್ಯತೆ ಅಧಿಕವಾಗಿದೆ. ಅಲ್ಲದೇ ಕಂಪ್ಯೂಟರ್‌ಗಳು ಒಡೆದು ಹೋಗುವ ಸಾಧ್ಯತೆ ಹೆಚ್ಚು. ಹೀಗಾಗಿ ಗ್ರಂಥಾಲಯಕ್ಕೆ ಮೂಲ ಸೌಕರ್ಯ ಒದಗಿಸಲು ಸಂಬಂಧಪಟ್ಟವರು ಮುತುವರ್ಜಿವಹಿಸಬೇಕಾಗಿದೆ.
ಗ್ರಂಥಾಲಯಕ್ಕೆ ಓದುಗರರ ಸ್ಪಂದನೆ ಚೆನ್ನಾಗಿದೆ. ಕಥೆ, ಕಾದಂಬರಿಗಳು, ಮಕ್ಕಳ ಸಾಹಿತ್ಯ ಪುಸ್ತಕ, ಸ್ಮರ್ಧಾತ್ಮಕ ಪುಸ್ತಕಗಳು ಸೇರಿ 34456 ಪುಸ್ತಕಗಳಿವೆ. ಗ್ರಂಥಾಲಯದಲ್ಲಿ ಒಟ್ಟು ಮೂರು ವಿಭಾಗಳಿದ್ದು, 2002ರಲ್ಲಿ ನಿರ್ಮಾಣವಾದ ಹಳೆಯ ಓದುಗರರ ವಿಭಾಗದ ಕಟ್ಟಡದ ಛಾವಣಿ ಕಾಂಕ್ರೀಟ್ ಉದುರುತ್ತಿದೆ. | ಗುಡ್ಲಾನೂರು ಮಲ್ಲಪ್ಪ, ಗ್ರಂಥಾಲಯ ಅಧಿಕಾರಿ, ಕೊಟ್ಟೂರು ಸಾರ್ವಜನಿಕ ಗ್ರಂಥಾಲಯ