ಕೊಟ್ಟೂರು: ವೀರಶೈವ ಧರ್ಮವು ಎಲ್ಲ ವರ್ಗದ ಹಿತ ಕಾಪಾಡುವ ತತ್ವ-ಸಿದ್ಧಾಂತ ಹೊಂದಿದ್ದು, ವಿರೋಧ ರಹಿತ ಧರ್ಮ ಇದಾಗಿದೆ ಎಂದು ಕಾಶಿ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಚಾನುಕೋಟಿ ಮಠದ ಪೀಠಾಧ್ಯಕ್ಷ ಡಾ. ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳ ಷಷ್ಠಿ ಸಂಭ್ರಮ ಹಾಗೂ ಪಂಚಾಚಾರ್ಯರ ಯುಗಮಾನೋತ್ಸವದ ನಿಮಿತ್ತ ಶುಕ್ರವಾರ ಸಂಜೆ ಆಯೋಜಿಸಿದ್ದ ಧರ್ಮ ಸಭೆಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಪಿತೃ, ದೇವ ಹಾಗೂ ಗುರುವಿನ ಋಣವನ್ನು ತೀರಿಸಿದಾಗ ಮಾತ್ರ ಮನುಷ್ಯನಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ. ಈ ದೃಷ್ಟಿಯನ್ನಿಟ್ಟುಕೊಂಡು ಮನುಷ್ಯ ತನ್ನ ಬದುಕನ್ನು ಅರ್ಪಣೆ ಮಾಡಿಕೊಳ್ಳಬೇಕು. ಒಂದು ಕ್ಷಣದ ಆಯುಷ್ಯಕ್ಕೆ ಬೆಲೆ ಕಟ್ಟಲಾಗದು. ನೀವು ಎಷ್ಟೇ ಐಶ್ವರ್ಯವನ್ನು ವ್ಯಯಿಸಿದರೂ ದೊರೆಯದು. ಇದ್ದ ಆಯುಷ್ಯವನ್ನು ಸಾರ್ಥಕವಾಗಿಸಿಕೊಳ್ಳಬೇಕು ಎಂದು ಹೇಳಿದರು.
ಚಾನುಕೋಟಿ ಮಠದ ಡಾ. ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೀರಶೈವ ಧರ್ಮ ಕೇವಲ ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಸೀಮಿತವಾಗಿಲ್ಲ. ಭಾರತದ ಪ್ರತಿ ರಾಜ್ಯ ಮತ್ತು ಜಿಲ್ಲೆಗಳಲ್ಲಿ ಲಿಂಗಪೂಜೆ ಮಾಡುವ ಜನರಿದ್ದಾರೆ. ಸಿದ್ಧಾಂತ ಶಿಖಾಮಣಿ ಬಾಂಗ್ಲಾ, ರಷ್ಯಾ ಭಾಷೆಗೆ ಭಾಷಾಂತರವಾಗಿದೆ. ವಿಶ್ವವಿದ್ಯಾಲಯ ಮಟ್ಟದಲ್ಲಿ ವೀರಶೈವ ಸಿದ್ಧಾಂತ ಕುರಿತು ಪಠ್ಯ ಇರಲಿಲ್ಲ. ಕರೋನದಲ್ಲಿ ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಬರೆದ ‘ವೀರಶೈವ ಪಂಚ ಸೂತ್ರಾಣಿ’ ಬನಾರಸ್ ವಿಶ್ವವಿದ್ಯಾಲಯದಲ್ಲಿ ಪಠ್ಯವಾಗಿದೆ ಎಂದರು.