ಕೊಟ್ಟೂರು: ಚಂದ್ರಯಾನ-3 ಯಶಸ್ವಿಯಾದ ಹಿನ್ನೆಲೆಯಲ್ಲಿ ಪಟ್ಟಣದ ಕೊಟ್ಟೂರೇಶ್ವರ ಪಪೂ ಮತ್ತು ಪದವಿ ಕಾಲೇಜಿನಿಂದ ಶುಕ್ರವಾರ ನೂರಾರು ವಿದ್ಯಾರ್ಥಿಗಳ ಮೆರವಣಿಗೆ ಮೂಲಕ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.
ಚಂದ್ರಯಾನ-3 ನೌಕೆಯ ಸಿದ್ಧಪಡಿಸಿದವರಲ್ಲಿ ಇಬ್ಬರು ಇಸ್ರೋ ವಿಜ್ಞಾನಿಗಳು ಕೊಟ್ಟೂರು ತಾಲೂಕಿನವರು. ಕೊಟ್ಟೂರೇಶ್ವರ ಕಾಲೇಜಿನ ವಿದ್ಯಾರ್ಥಿ ದಾರುಕೇಶ ಮತ್ತು ತೂಲಹಳ್ಳಿ ಗ್ರಾಮದ ಗೋವಿಂದರಾಜ್ ಶೆಟ್ಟಿ ಸೇರಿದಂತೆ ಇಸ್ರೋ ಸಂಸ್ಥೆಯ ಎಲ್ಲ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಲು 36 ಅಡಿ ಉದ್ದದ ರಾಷ್ಟ್ರ ಧ್ವಜದೊಂದಿಗೆ ಪಟ್ಟಣದಲ್ಲಿ ಮೆರವಣಿಗೆ ನಡೆಸಲಾಯಿತು.
600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಇಸ್ರೋ ವಿಜ್ಞಾನಿಗಳಾದ ದಾರುಕೇಶ ಮತ್ತು ಗೋವಿಂದ ರಾಜಶೆಟ್ಟಿಗೆ ಹಾಗೂ ಇತರ ವಿಜ್ಞಾನಗಳಿಗೆ ಜಯವಾಗಲಿ, ಇನ್ನೂ ಯಶಸ್ಸು ಸಾಧಿಸಲಿ ಎಂಬ ಘೋಷಣೆ ಮುಗಿಲು ಮುಟ್ಟಿತು. ಕಾಲೇಜಿನಿಂದ ಉಜ್ಜಿನಿ ಸರ್ಕಲ್ ಹಾದು ಕೊಟ್ಟೂರೇಶ್ವರ ಸ್ವಾಮಿ ದೇವಾಲಯಕ್ಕೆ ಆಗಮಿಸಿ ದೇವರಲ್ಲಿ ಪ್ರಾರ್ಥಿಸಿ ನಂತರ ಗಾಂಧಿ ಸರ್ಕಲ್ ಮೂಲಕ ರೇಣುಕಾ ಟಾಕೀಸ್ ರಸ್ತೆ ಮೂಲಕ ಮೆರವಣಿಗೆ ಮತ್ತೆ ಕಾಲೇಜು ತಲುಪಿತು. ವಿದ್ಯಾರ್ಥಿಗಳ ಜಯಘೋಷಗಳಿಗೆ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಜನರು ಧ್ವನಿಗೂಡಿಸಿದರು.
ಮೆರವಣಿಗೆಯಲ್ಲಿ ರಾಕೆಟ್ ಮತ್ತು ವಿಕ್ರಂ ನೌಕೆಯ ಮಾದರಿಗಳು ಗಮನ ಸೆಳೆದವು. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ, ಕಸಾಪ ನಿಕಟಪೂರ್ವ ಜಿಲ್ಲಾ ಅಧ್ಯಕ್ಷ ಸಿದ್ದರಾಮ ಕಲ್ಮಠ, ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಎಂ.ರವಿಕುಮಾರ್, ಪಪೂ ಕಾಲೇಜ್ ಪ್ರಾಚಾರ್ಯ ಪ್ರಶಾಂತ ಇತರರಿದ್ದರು.