ಕೊಟ್ಟೂರು: ಯುವ ಪೀಳಿಗೆ ಮಾದಕ ದ್ರವ್ಯಗಳ ದಾಸರಾಗಿ ಮಾನಸಿಕ ಹಾಗೂ ದೈಹಿಕ ತೊಂದರೆಗೆ ಗುರಿಯಾಗುತ್ತಿದ್ದಾರೆ. ಮಾದಕ ವಸ್ತುಗಳ ದುಷ್ಪರಿಣಾಮದ ಕುರಿತು ಪ್ರೌಢಶಾಲೆ ಪಠ್ಯದಲ್ಲಿ ಅಳವಡಿಸಿದರೆ ವಿದ್ಯಾರ್ಥಿಗಳು ಜಾಗೃತರಾಗಲಿದ್ದಾರೆ ಎಂದು ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು.
ಪಟ್ಟಣದಲ್ಲಿ ಪೊಲೀಸ್ ಇಲಾಖೆ ಯಿಂದ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಮಾದಕ ದ್ರವ್ಯ ವಿರೋಧಿ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಸ್ಲಿಂ ರಾಷ್ಟ್ರಗಳಲ್ಲಿ ಮಾದಕ ವಸ್ತುಗಳ ಸೇವನೆಗೆ ನಿಷೇಧವಿದೆ. ಆದರೆ, ನಮ್ಮ ದೇಶದಲ್ಲಿ ಯುವಕರೇ ಹೆಚ್ಚಾಗಿ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಅವದೂತರ ಹೆಸರಿನಲ್ಲಿ ಗಾಂಜಾ ಸೇವನೆ ಮಾಡಲಾಗುತ್ತಿದ್ದು, ವಿದ್ಯಾರ್ಥಿಗಳು ಇದನ್ನು ವಿರೋಧಿಸಬೇಕು ಎಂದರು.
ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಮಾತನಾಡಿ, ಯುವಕರು ಹೆಚ್ಚಾಗಿ ದುಶ್ಚಟಕ್ಕೆ ದಾಸರಾಗುತ್ತಿದ್ದು, ಸಮಾಜಕ್ಕೆ ಇದೊಂದು ಮಾರಕ ರೋಗವಾಗಿದೆ. ಇದಕ್ಕೆ ಯಾರೂ ಬಲಿಯಾಗಬಾರದು. ಮಾದಕ ವ್ಯಸನಿಗಳು ಕಂಡು ಬಂದರೆ, ಗುಪ್ತವಾಗಿ ಪೊಲೀಸರಿಗೆ ಮಾಹಿತಿ ನೀಡಿ. ದೂರುದಾರರ ಹೆಸರನ್ನು ಎಲ್ಲಿಯೂ ಬಹಿರಂಗಪಡಿಸುವುದಿಲ್ಲ. ಆರೋಗ್ಯವಂತ ಯುವಕರು ದೇಶದ ಸಂಪತ್ತು. ಆರೋಗ್ಯವಂತರಾಗಿ ದೇಶ ಸೇವೆ ಮಾಡಿ ಎಂದರು. ಲೇಖಕ ಉಜ್ಜಿನಿ ರುದ್ರಪ್ಪ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ವಿರೋಧದ ಪ್ರತಿಜ್ಞೆ ಬೋಧಿಸಿದರು.