ಕೊಟ್ಟೂರಿನ ಗೊರ್ಲಿ ಶರಣಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮ ದಲ್ಲಿ ಧಾರವಾಡ ಐಐಟಿ ಪ್ರಾಧ್ಯಾಪಕ ಪ್ರೊ.ಎಸ್.ಎಂ.ಶಿವಪ್ರಸಾದ್ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಸಿದ್ದೇಶ, ಎ. ಶಾಂತಕುಮಾರ್, ರಾಮಣ್ಣ, ಬಂಜಾರ ನಾಗರಾಜ, ವಿನಯ್ ಮುದೇನೂರು ಇತರರಿದ್ದರು. 
ಜಿಲ್ಲೆ

ಕೇವಲ ಅಂಕಗಳಿಂದ ಜಾಣತನ ಅಳೆಯದಿರಿ

ಶಾಮಸುಂದರ್ ಕೊಪ್ಪಳಕರ್

ಕೊಟ್ಟೂರು: ನಿಸರ್ಗವನ್ನು ಅರಿಯುವುದರ ಜತೆಗೆ ಪ್ರತಿಯೊಂದನ್ನು ತಿಳಿದುಕೊಳ್ಳುವ ಕುತೂಹಲ ಗುಣ ಬೆಳೆಸಿಕೊಂಡಲ್ಲಿ ವಿಜ್ಞಾನಿಯಾಗಲು ಸಾಧ್ಯ ಎಂದು ಧಾರವಾಡ ಐಐಟಿ ಪ್ರಾಧ್ಯಾಪಕ, ವಿಜ್ಞಾನಿ ಪ್ರೊ.ಎಸ್.ಎಂ.ಶಿವಪ್ರಸಾದ್ ಅಭಿಪ್ರಾಯಪಟ್ಟರು.

ಪಟ್ಟಣದ ಗೊರ್ಲಿ ಶರಣಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಭವನದಲ್ಲಿ ಶನಿವಾರ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಹಾಗೂ ಸಂಘ ಸಂಸ್ಥೆಗಳ ಸಹಯೋಗದಲ್ಲಿ ವಿವಿಧ ಪ್ರೌಢ ಶಾಲಾ ವಿದ್ಯಾರ್ಥಿಗಳೊಂದಿಗೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಕೇವಲ ಪಠ್ಯಕ್ರಮಕ್ಕೆ ಸೀಮಿತವಾಗಬಾರದು. ಅದರಾಚೆಗೂ ಕಲಿಯುವುದು ಬಹಳಷ್ಟಿದ್ದು, ಗಮನಹರಿಸಬೇಕು. ಪ್ರತಿಯೊಬ್ಬರೂ ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು ಎಂದರು.

ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ, ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವಲ್ಲಿ ಉಪನ್ಯಾಸಕರ ಪಾತ್ರ ಮುಖ್ಯವಾಗಿದೆ. ಕೇವಲ ಅಂಕಗಳ ಮಾನದಂಡದಿಂದ ವಿದ್ಯಾರ್ಥಿಗಳ ಜಾಣತನ ಅಳೆಯಬಾರದು. ಅವರಲ್ಲಿ ಅಡಗಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು. ಪರೀಕ್ಷಾ ರಹಿತ ಶಿಕ್ಷಣ ವ್ಯವಸ್ಥೆ ಕಲ್ಪಿಸಿದರೆ ಮಕ್ಕಳು ಒತ್ತಡದಿಂದ ಪಾರಾಗಿ ತಮಗಿಷ್ಟವಾದ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು. ಉಪನ್ಯಾಸಕ ಸಿದ್ದೇಶ್ ಮಾತನಾಡಿದರು. ವಿಜ್ಞಾನ ಸಮಿತಿ ಸದಸ್ಯ ಅಲಬೂರು ಶಾಂತಕುಮಾರ್, ರಾಮಣ್ಣ, ನಾಗರಾಜ್ ಬಂಜಾರ್, ವಿನಯ್ ಮುದೇನೂರ್, ಉಪನ್ಯಾಸಕರಾದ ಸಿ.ಬಸವರಾಜ್, ಕೆ.ಎಂ.ರೇಣುಕಾಸ್ವಾಮಿ, ಆರಾಧ್ಯ ಸ್ವಾಮಿ, ಚೇತನ್ ಚವ್ಹಾಣ್, ಡಾ.ವಿಜಯಕುಮಾರ್, ಕೆ.ಕೊಟ್ರೇಶ್, ಶಿಪಪ್ರಕಾಶ್ ಇತರರಿದ್ದರು.