ಕೊಟ್ಟೂರು: ಎರಡು ದಿನ ಸುರಿದ ಮಳೆಗೆ ಪಟ್ಟಣದ ಡಾ.ಅಂಬೇಡ್ಕರ್ ನಗರದ ಮನೆಗಳಿಗೆ ನೀರು ನುಗ್ಗಿ ಜನರು ಸಮಸ್ಯೆ ಎದುರಿಸಿದ್ದರಿಂದ ಶನಿವಾರ ಜಿಲ್ಲಾಧಿಕಾರಿ ಪವನ್‌ಕುಮಾರ್ ಮಾಲಪಾಟಿ ಭೇಟಿ ನೀಡಿ ಪರಿಶೀಲಿಸಿದರು.
ಕಾರ್ಯನಿಮಿತ್ತ ಹರಪನಹಳ್ಳಿಗೆ ಹೊರಟಿದ್ದ ಜಿಲ್ಲಾಧಿಕಾರಿ ಮಾಲಪಾಟಿ, ತಹಸೀಲ್ದಾರ್ ಜಿ.ಅನಿಲ್ ಕುಮಾರ್‌ರನ್ನು ಭೇಟಿಯಾಗಿ ತಾಲೂಕಿನಲ್ಲಾದ ಮಳೆ ಹಾನಿ ಮಾಹಿತಿ ಪಡೆದರು. ಬಳಿಕ ಡಾ.ಅಂಬೇಡ್ಕರ್ ನಗರಕ್ಕೆ ತೆರಳಿ ಪರಿಸ್ಥಿತಿ ಅವಲೋಕಿಸಿದರು. ಅಲ್ಲದೆ ತುಂಬಿ ಹರಿಯುತ್ತಿರುವ ಚರಂಡಿ ನೋಡಿದ ಡಿಸಿ, ಕೂಡಲೇ ಸ್ವಚ್ಛಗೊಳಿಸಿ, ಕಾಲುವೆಯನ್ನು ದೊಡ್ಡದಾಗಿ ನಿರ್ಮಿಸುವಂತೆ ಸ್ಥಳದಲ್ಲಿದ್ದ ಪಪಂ ಮುಖ್ಯಾಧಿಕಾರಿ ಟಿ.ಎಸ್.ಗಿರೀಶ್‌ಗೆ ಸೂಚನೆ ನೀಡಿದರು. ನಿವಾಸಿಗಳು ಮನೆಗೊಂದು ಶೌಚಗೃಹ ನಿರ್ಮಿಸಿಕೊಳ್ಳಬೇಕು. 45 ವರ್ಷ ಮೇಲ್ಪಟ್ಟವರು ಕರೊನಾ ಲಸಿಕೆ ಹಾಕಿಸಿಕೊಳ್ಳುವಂತೆ ಸಲಹೆ ನೀಡಿದರು.
ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಬಿ.ದುರುಗೇಶ ಮಾತನಾಡಿ, ಇಲ್ಲಿ 25 ವರ್ಷಗಳಿಂದ ಮನೆ ನಿರ್ಮಿಸಿಕೊಂಡು ಜನರು ವಾಸಿಸುತ್ತಿದ್ದು, ಮನೆಗಳನ್ನು ಸಕ್ರಮಗೊಳಿಸಬೇಕೆಂದು ಮನವಿ ಮಾಡಿದರು. ಸಿಪಿಐ ದೊಡ್ಡಣ್ಣ. ಪಿಎಸ್‌ಐ ನಾಗಪ್ಪ, ಕಂದಾಯ ನಿರೀಕ್ಷಕ ಹಾಲಸ್ವಾಮಿ ಇತರರಿದ್ದರು.