ಕೊಟ್ಟೂರು ಪಪಂಗೆ ಆಯ್ಕೆಯಾದ ಅಧ್ಯಕ್ಷೆ ಭಾರತಿ ಸುಧಾಕರ ಗೌಡ, ಉಪಾಧ್ಯಕ್ಷ ಕೆ.ಶಫಿರನ್ನು ಸನ್ಮಾನಿಸಲಾಯಿತು. 
ಜಿಲ್ಲೆ

ಕೊಟ್ಟೂರು ಪಪಂ ಅಧಿಕಾರ ಕೈವಶ: ಬೆಂಬಲಿಸಿದ ಪಕ್ಷೇತರ ಸದಸ್ಯನಿಗೆ ಸಿಕ್ಕಿತು ಉಪಾಧ್ಯಕ್ಷ ಸ್ಥಾನ

ಕೊಟ್ಟೂರು: ಎರಡು ವರ್ಷದ ಬಳಿಕ ಸ್ಥಳೀಯ ಪಟ್ಟಣ ಪಂಚಾಯಿತಿ ಅಧಿಕಾರ ಕಾಂಗ್ರೆಸ್ ವಶವಾಗಿದೆ. ಶುಕ್ರವಾರ ನಡೆದ ಪಪಂ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಭಾರತಿ ಸುಧಾಕರಗೌಡ, ಪಕ್ಷೇತರ ಸದಸ್ಯ ಕೆ.ಶಫಿ ಅಧ್ಯಕ್ಷೆ, ಉಪಾಧ್ಯಕ್ಷರಾಗಿ ಆಯ್ಕೆಯಾದರು. ಕಾಂಗ್ರೆಸ್‌ನ 9 ಸದಸ್ಯರೊಂದಿಗೆ ಪಕ್ಷೇತರ ಸದಸ್ಯ ಕೆ.ಶಫಿ ಬೆಂಬಲ ಹಾಗೂ ಶಾಸಕರ ಒಂದು ವೋಟ್ ಸೇರಿ 11 ಮತಗಳಾಗಿದ್ದರಿಂದ ಸುಲಭವಾಗಿ ಪಪಂ ಅಧಿಕಾರ ಕೈ ಸೇರಿತು.

ಬಿಜೆಪಿ ಸದಸ್ಯರ ಸಂಖ್ಯಾ ಬಲದ ಕೊರತೆ ನಡವೆಯೂ ಅಧ್ಯಕ್ಷ ಸ್ಥಾನಕ್ಕೆ ಇಂದಿರಾ ಭರಮಪ್ಪ, ಉಪಾಧ್ಯಕ್ಷ ಸ್ಥಾನಕ್ಕೆ ಬೋರ್‌ವೆಲ್ ತಿಪ್ಪೇಸ್ವಾಮಿ ನಾಮಪತ್ರ ಸಲ್ಲಿಸಿದ್ದರು. ಎಂಟು ಸದಸ್ಯರ ಪೈಕಿ ಪಕ್ಷದ ಕೆಂಗರಾಜ್, ವೀಣಾ ವಿವೇಕಾನಂದಗೌಡ ಗೈರಾಗಿದ್ದರಿಂದ ಸದಸ್ಯ ಬಲ ಆರಕ್ಕೆ ಇಳಿಯಿತು. ಸಂಸದರ ಒಂದು ವೋಟ್ ಇದ್ದರೂ ಅಧಿಕಾರ ಹಿಡಿಯಲು ಸಾಧ್ಯವಾಗಲಿಲ್ಲ. ಅಲ್ಲದೆ ಪಕ್ಷೇತರ ಸದಸ್ಯರಾದ ಬಾವಿಕಟ್ಟಿ ಶಿವಾನಂದ, ರೇಖಾ ರಮೇಶ ಕೂಡ ಗೈರಾಗಿದ್ದು, 16 ಸದಸ್ಯರು ಮಾತ್ರ ಹಾಜರಾಗಿದ್ದರು. ತಹಸೀಲ್ದಾರ್ ಜಿ.ಅನಿಲ್ ಕುಮಾರ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಪಪಂ ಮುಖ್ಯಾಧಿಕಾರಿ ಗಿರೀಶ್ ಇದ್ದರು.