ಕೊಟ್ಟೂರು: ಶುಕ್ರವಾರ ರಾತ್ರಿ ಧಾರಾಕಾರ ಸುರಿದ ಮಳೆಗೆ ಇಲ್ಲಿನ ದೊಡ್ಡ ಕೆರೆ ಕೋಡಿ ಬಿದ್ದಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. 2022ರಲ್ಲಿ ಕೊಟ್ಟೂರು ಕೆರೆ ತುಂಬಿ ಕೋಡಿ ಬಿದ್ದಿತ್ತು. ಎರಡು ವರ್ಷಗಳ ನಂತರ ಈಗ ಕೆರೆ ಕೋಡಿ ಬಿದ್ದಿದೆ.
ಕೆರೆಯು 852 ಎಕರೆ ವಿಸ್ತೀರ್ಣವಿದೆ. ಕೆರೆಯ ನೀರು ಸುಮಾರು ಮೂರರಿಂದನಾಲ್ಕು ಸಾವಿರ ಎಕರೆ ಭೂಮಿಗೆ ನೀರು ಹಾಯುತ್ತಿತ್ತು. ರೈತರು ಗದ್ದೆ ಕೃಷಿಯಿಂದ ಹಿಮ್ಮುಖವಾಗಿದ್ದಾರೆ. 10 ಕಿ.ಮೀ. ವ್ಯಾಪ್ತಿಯ ಕೊಳವೆಬಾವಿಗಳ ಅಂತರ್ಜಲ ಹೆಚ್ಚಾಗುವುದರಿಂದ ಕೃಷಿಗೆ ಹೆಚ್ಚು ಅನುಕೂಲವಾಗಲಿದೆ. ಕೊಟ್ಟೂರು ಸಮೀಪದ ಕೆ. ಅಯ್ಯನಹಳ್ಳಿ ರೈಲ್ವೆ ಬ್ರಿಡ್ಜ್, ಇಟಗಿ ರಸ್ತೆಯ ರೈಲ್ವೆ ಬ್ರಿಡ್ಜ್ ಕೆಳಗೆ ಮಳೆಯಿಂದ ನೀರು ನಿಂತಿರುವುದರಿಂದ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದೆ.
ಮಲ್ಲನಾಯ್ಕನಹಳ್ಳಿಯ ವಡ್ಡರ ಹಳ್ಳದಲ್ಲಿ ನೀರು ಅಧಿಕ ಪ್ರಮಾಣದಲ್ಲಿ ನೀರು ಬಂದ ಕಾರಣ ವಾಹನ ಸಂಚಾರಕ್ಕೂ ತೊಂದರೆಯಾಗಿದೆ. ಶುಕ್ರವಾರ ಸುರಿದ ಮಳೆಗೆ ಇಲ್ಲಿನ ಸರ್ಕಾರಿ ಬಸ್ ನಿಲ್ದಾಣ ಕೆರೆಯಂತಾಗಿತ್ತು. ಈ ಸಮಸ್ಯೆ ಪ್ರತಿ ಸಾರಿಯೂ ಮಳೆ ಬಂದಾಗ ನಿಲ್ದಾಣ ಕೆರೆಯಂತಾಗುತ್ತದೆ.
ಕೊಟ್ಟೂರು ಕೆರೆಯ ಎರಡು ತೂಬು ರಿಪೇರಿ ಮತ್ತು ಏರಿಯನ್ನು ಅಭಿವೃದ್ದಿಗೊಳಿಸಲು 2 ಕೋಟಿ ರೂ. ಅನುದಾನ ಬಂದಿತ್ತು. ಆದರೆ ಕಾಮಗಾರಿ ಆರಂಭಿಸಲು ವಿಳಂಬವಾದ ಕಾರಣ ಅನುದಾನ ವಾಪಸು ಹೋಗಿತ್ತು. ಈ ಅನುದಾನವನ್ನು ಈಗ ಮರಳಿ ಪಡೆದು ಕೆರೆಯ ಅಭಿವೃದ್ಧಿಗೆ ಬಳಸಲಾಗುವುದು.ಸೂಗಪ್ಪಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಸಣ್ಣ ನೀರಾವರಿ ಉಪ ವಿಭಾಗ ಕೂಡ್ಲಿಗಿ