ಉಚಿತ ಪ್ರಸಾದ, ಔಷಧೋಪಚಾರ ಸಿಗದೇ ಪರದಾಟ | ವಿಶೇಷ ಬಸ್ ಸಂಚಾರವಿಲ್ಲದ ಕಾರಣ ತೊಂದರೆ
ಕೊಟ್ಟೂರು: ಕರೊನಾ ಕಾರಣದಿಂದ ಭಕ್ತರು, ಯಾತ್ರಿಗಳ ಪ್ರವೇಶ ನಿಷೇಧ ಹೇರಿದ್ದರ ಮಧ್ಯೆಯೂ ಪಟ್ಟಣದ ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವಕ್ಕೆ ಶುಕ್ರವಾರ ಸಾವಿರಾರು ಭಕ್ತರು ಆಗಮಿಸಿದ್ದಾರೆ.
ಜಿಲ್ಲಾಡಳಿತ ಫೆ. 24 ರಂದು ರಥೋತ್ಸವದ ದಿನ ಮತ್ತು ಫೆ. 25ರಂದು ಕೊಟ್ಟೂರೇಶ್ವರ ಸ್ವಾಮಿ ದರ್ಶನಕ್ಕೆ ನಿಷೇಧ ಹೇರಿ ಆದೇಶ ಹೊರಡಿಸಿತ್ತು. ಈ ನಿರ್ಧಾರದಿಂದ ಭಕ್ತರು ತೀವ್ರ ಬೆಸರಗೊಂಡು ಜಿಲ್ಲಾಡಳಿತ ವಿರುದ್ಧ ಅಸಹನೆ ವ್ಯಕ್ತಪಡಿಸಿದರು. ಇದನ್ನು ಅರಿತ ಮುಜರಾಯಿ ಇಲಾಖೆ ಸಹಾಯಕ ಆಯುಕ್ತ ಪ್ರಕಾಶ ರಾವ್ ಡಿಸಿ ಅನಿರುದ್ಧ್ ಶ್ರವಣ್‌ಗೆ ಪರಿಸ್ಥಿತಿ ವಿವರಿಸಿದ್ದರು. ನಂತರ ಮಧ್ಯಾಹ್ನ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಇದರಿಂದ ಭಕ್ತರು ಖುಷಿಕೊಂಡರು.
ಪಾದಯಾತ್ರಿಗಳು ಫೆ.24ರಂದು ಹೆಚ್ಚಿನ ಪ್ರಮಾಣದಲ್ಲೇ ಬಂದರು. ಆದರೆ, ಪ್ರಸಾದ ವಿತರಣೆಗೆ ಜಿಲ್ಲಾಡಳಿತ ಬ್ರೇಕ್ ಹಾಕಿದ್ದರಿಂದ ತೊಂದರೆ ಎದುರಿಸಬೇಕಾಯಿತು. 50 ರಿಂದ ಹಿಡಿದು 100 ಕಿ.ಮೀ. ದೂರದಿಂದ ಬರಿಗಾಲಲ್ಲಿ ನಡೆದು ಬಂದಿದ್ದ ಪಾದಯಾತ್ರಿಕರು ಹಸಿವು, ನೀರಡಿಕೆಯಿಂದ ಬಳಲಿದರು. ಜಾಗ ಸಿಕ್ಕಲ್ಲಿ ಮಲಗಿ ವಿಶ್ರಾಂತಿ ಪಡೆದರು. ಮಧ್ಯಾಹ್ನ ದೇವರ ದರ್ಶನಕ್ಕೆ ಮತ್ತು ಉಚಿತ ಪ್ರಸಾದ ವ್ಯವಸ್ಥೆಗೆ ಒಪ್ಪಿಗೆ ಸಿಕ್ಕ ಮೇಲೆ ಅಲ್ಲಲ್ಲಿ ಉಚಿತ ಪ್ರಸಾದ ವ್ಯವಸ್ಥೆ ಆರಂಭವಾಯಿತು. ನಂತೆ ಕೊಂಚ ಮಟ್ಟಿಗೆ ಭಕ್ತರು ನಿರಾಳಗೊಂಡರು.