ಕೊಟ್ಟೂರೇಶ್ವರ ಕಾಲೇಜಲ್ಲಿ ಮಹಿಳಾ ಗೋಷ್ಠಿ
ಕೊಟ್ಟೂರು : ಕೇಸರಿ ಬಣ್ಣಕ್ಕೆ ನಮ್ಮ ಚರಿತ್ರೆಯಲ್ಲಿ ವಿಶೇಷ ಅರ್ಥವಿದೆ. ಇಡೀ ವಿಶ್ವಕ್ಕೆ ಹಿಂದುತ್ವದ ಸದ್ದುದ್ದೇಶವನ್ನು ಸಾರಿದ ವಿವೇಕಾನಂದ ಧರಿಸಿದ ಕೇಸರಿ ಬಣ್ಣ, ಇಂದು ಮನೆ ಮನೆಗಳನ್ನು ಮನಸ್ಸುಗಳನ್ನು ಒಡೆಯುತ್ತಿದೆ ಎಂದು ಹಂಪಿ ವಿವಿಯ ವಿಶ್ರಾಂತ ಕುಲಪತಿ ಪ್ರೊ ಮಲ್ಲಿಕಾ ಘಂಟಿ ಬೇಸರ ವ್ಯಕ್ತಪಡಿಸಿದರು.
ಕೊಟ್ಟೂರೇಶ್ವರ ಮಹಾವಿದ್ಯಾಲಯದ ಸುವರ್ಣ ಮಹೋತ್ಸವದ ಎರಡನೇ ದಿನ ಗುರುವಾರ ಸ್ತ್ರೀ ಸಂವೇದನೆ-ವರ್ತಮಾನ-ಸ್ತ್ರೀ ಸಬಲೀಕರಣ ಕುರಿತ ಮಹಿಳಾ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪುರಾಣ, ಕಾವ್ಯಗಳಲ್ಲಿ ಹೆಣ್ಣನ್ನು ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ. ಈಗ ವಾಟ್ಸಆ್ಯಪ್, ಫೇಸ್‌ಬುಕ್‌ಗಳಲ್ಲೂ ಅದೇ ಮುಂದುವರಿದಿದೆ ಎಂದು ಆತಂಕ ವ್ಯಕ್ತಪಡಿಸಿದರು. ಮಹಿಳೆಯರು ಸಕ್ರಿಯ ರಾಜಕೀಯದಲ್ಲಿ ಹೆಚ್ಚು ಅಧಿಕಾರ ಪಡೆದರೆ, ಮಹಿಳೆಯರ ಮೇಲಿನ ದೌರ್ಜನ್ಯ, ದಬ್ಬಾಳಿಕೆ ಕೊಂಚಮಟ್ಟಿಗೆ ತಡೆಯಬಹುದು ಎಂದರು.
ಗೋಷ್ಠಿ ಉದ್ಘಾಟಿಸಿದ ಕೊಪ್ಪಳದ ವಕೀಲೆ ಸಾವಿತ್ರಿ ಮುಜಾಂದರ್ ಮಾತನಾಡಿ, ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ ಮಹಿಳಾ ಸಾಹಿತಿಗಳನ್ನು ಸಂಪೂರ್ಣ ಕಡೆಗಣಿಸಲಾಗಿತ್ತು. ಇಲ್ಲಿ ಮಹಿಳೆಯರಿಗಾಗಿ ಪ್ರತ್ರ್ಯೇಕ ಗೋಷ್ಠಿ ಇಟ್ಟಿರುವುದು ಸಂತೋಷದ ಸಂಗತಿ ಎಂದರು. ತುಮಕೂರು ವಿವಿ ಪ್ರಾಧ್ಯಾಪಕಿ ಗೀತಾ ವಸಂತ ಮಾತನಾಡಿ, ಮಹಿಳೆಯರನ್ನು ಕ್ರೀಡಾಕೂಟಗಳಲ್ಲಿ ಚಿಯರ್ ಗರ್ಲ್ಸ್ ಮಾಡಿ ಬಳಸಿಕೊಳ್ಳುತ್ತಿರುವುದು ಬೇಸರದ ಸಂಗತಿ ಎಂದರು. ಸಹ ಪ್ರಾಧ್ಯಾಪಕಿ ಡಾ. ಕುಸುಮಸಜ್ಜನ್ ಮಾತನಾಡಿದರು.
ಬಳ್ಳಾರಿ ವೀ.ವಿ.ಸಂಘದ ಅಧ್ಯಕ್ಷ ಎಚ್.ಎಂ.ಗುರುಸಿದ್ದಸ್ವಾಮಿ, ಕೊಟ್ಟೂರೇಶ್ವರ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಸಿದ್ದರಾಮ ಕಲ್ಮಠ, ಸದಸ್ಯರಾದ ಬಿ.ಕೊಟ್ರೇಶ, ಉತ್ತಂಗಿ ಕೊಟ್ರಗೌಡ, ಕೋರಿ ಬಸವರಾಜ, ಜೆ.ಸಿ.ಧನುಂಜಯ, ಅಡಕೆ ಮಂಜುನಾಥ, ಕೆ.ಬಿ.ಮಲ್ಲಿಕಾರ್ಜುನ, ಅವಂತಿ ಬಸವರಾಜ್, ಮಂಜುನಾಥ ಮಠಪತಿ ಇತರರು ಇದ್ದರು. ಕೆ.ಎಂ.ವೀರೇಶ್ ಸ್ವಾಗತಿಸಿ ನಿರೂಪಿಸಿದರು. ಶಿವಪ್ರಕಾಶ ವಂದಿಸಿದರು.