ಕೊಟ್ಟೂರು ಕೆರೆಯ ಎರಡನೇ ತೂಬಿನಿಂದ ನೀರು ನಿರಂತರವಾಗಿ ಹರಿಯುತ್ತಿದೆ. 
ಜಿಲ್ಲೆ

ಕೊಟ್ಟೂರು ಕೆರೆಯಿಂದ ನೀರು ಪೋಲು

ರುದ್ರಪ್ಪ ವಾಲಿ

ಕೊಟ್ಟೂರು: ಕೊಟ್ಟೂರು ಕೆರೆ ಅರ್ಧಭಾಗ ತುಂಬಿದ್ದು, ಕಳೆದ ವರ್ಷದಂತೆ ಈ ವರ್ಷವೂ ಕೆರೆ ತುಂಬುವ ನಿರೀಕ್ಷೆ ಇದೆ. ಆದರೆ ಎರಡನೇ ತೂಬಿನಲ್ಲಿ ನೀರು ನಿರಂತರ ಸೋರಿಕೆಯಾಗುತ್ತಿದೆ. ತೂಬಿನಿಂದ ನೀರು ಸೋರಿಕೆಯಾಗಿ, ಕಾಲುವೆ ಮೂಲಕ ಹರಿದ ಪರಿಣಾಮ ಸುಮಾರು 40 -50 ಎಕರೆ ಗದ್ದೆಯಲ್ಲಿ ನೀರು ನಿಂತಿದೆ. ರೈತರು ಭತ್ತ ಸೇರಿದಂತೆ ಇತರೆ ಬೆಳೆ ಬೆಳೆಯಲು ಸಿದ್ಧತೆ ಮಾಡಿಕೊಂಡಿದ್ದ ರೈತರು ಕೈಚಲ್ಲುವಂತಾಗಿದೆ. ಕೆರೆ ನೀರಿಗೆ ಕೃಷಿ ಮಾಡಲು ಗದ್ದೆ ಮಾಲೀಕರಿಂದ ಭೂಮಿಯನ್ನು ಗುತ್ತಿಗೆ ಪಡೆದ ರೈತರು ದಿನವೂ ನೀರು ಹರಿಯುತ್ತಿರುವುದರಿಂದ ಕೃಷಿ ಮಾಡಲಾಗದೆ ಗೋಳಾಡುತ್ತಿದ್ದಾರೆ. ಕಳೆದ ವರ್ಷ ಕೆರೆ ತುಂಬಿದಾಗಲೂ ಇದೇ ತೂಬಿನಿಂದ ಕೆರೆ ನೀರು ನಿರಂತರವಾಗಿ ಸೋರಿಕೆಯಾಗಿದ್ದರಿಂದ ಕೃಷಿ ಚಟುವಟಿಕೆಗೆ ಅಡೆತಡೆ ಉಂಟಾಗಿತ್ತು. ಈ ಕುರಿತು ಸಣ್ಣ ನೀರಾವರಿ ಇಲಾಖೆಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೃಷಿ ಅಭಿವೃದ್ಧಿಯಾಗಬೇಕು ಎಂದು ಸಾಕಷ್ಟು ಅನುದಾನ ಬಿಡುಗಡೆ ಮಾಡುಲಾಗುತ್ತದೆ. ಆದರೆ ಸಣ್ಣ ನೀರಾವರಿ ಇಲಾಖೆ ತೂಬುಗಳನ್ನು ರಿಪೇರಿ ಮಾಡದೆ ಇರುವುದರಿಂದ ನೀರು ವ್ಯರ್ಥವಾಗಿ ಹರಿಯಲು ಬಿಟ್ಟಿದೆ ಎಂದು ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಭರಮಪ್ಪ ಆರೋಪಿಸಿದರು.

ನಾನು ಇತ್ತೀಚೆಗೆ ವರ್ಗವಾಗಿ ಬಂದಿದ್ದೇನೆ. ಕಳೆದ ವರ್ಷ ತೂಬಿನಿಂದ ನೀರು ಸೋರಿರುವುದು ಗೊತ್ತಿಲ್ಲ. ತೂಬನ್ನು ರಿಪೇರಿ ಮಾಡಿ, ನೀರು ವ್ಯರ್ಥವಾಗಿ ಹರಿಯುವುದನ್ನು ನಿಲ್ಲಿಸಲಾಗುವುದು. ಕೋಟೇಶ್ವರ ರಾವ್ ಸಹಾಯಕ ಇಂಜಿನೀಯರ್, ಸಣ್ಣ ನೀರಾವರಿ ಇಲಾಖೆ ಕೂಡ್ಲಿಗಿ.