ಜಿಲ್ಲೆ

ಹದಗೆಟ್ಟ ರಸ್ತೆ ದುರಸ್ತಿಗೆ ಮುಂದಾದ ರೈತರು: ಕೊಟ್ಟೂರಿನ ಹೊಲಗಳಿಗೆ ಸಂಪರ್ಕಿಸುವ ಮಾರ್ಗ

Ballari

ಕೊಟ್ಟೂರು: ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸ್ಪಂದಿಸದ ಕಾರಣ ಇಲ್ಲಿನ ಕೊಟ್ಟೂರು ಹಿಂಭಾಗದಲ್ಲಿರುವ ಹೊಲಗಳಿಗೆ ಸಂಪರ್ಕಿಸುವ ರಸ್ತೆಯನ್ನು ರೈತರೇ ಸ್ವಂತ ಖರ್ಚಿನಲ್ಲಿ ದುರಸ್ತಿ ಮಾಡಿಸುತ್ತಿದ್ದಾರೆ.


ಜಮೀನುಗಳಿಗೆ ಸಂಪರ್ಕಿಸುವ ರಸ್ತೆ ಮೂರು ಕಿಮೀವರೆಗೆ ಸಂಪೂರ್ಣ ಹದಗೆಟ್ಟಿದ್ದು, ದುರಸ್ತಿ ಮಾಡಿಸುವಂತೆ ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ರೈತರು ಮನವಿ ಸಲ್ಲಿಸಿದ್ದಾರೆ. ಆದರೆ, ಯಾರೂ ಕ್ಯಾರೇ ಎನ್ನದ ಕಾರಣ ಬೇಸತ್ತ ರೈತರು ಭಾನುವಾರ ರಸ್ತೆ ದುರಸ್ತಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ.

ಸ್ವಂತ ಖರ್ಚಿನಿಂದಲೇ ಮೂರು ಜೆಸಿಬಿ ಮತ್ತು ಐದು ಟ್ರಾೃಕ್ಟರ್‌ಗಳನ್ನು ತರಿಸಿ ಮಳೆಗೆ ಕೊಚ್ಚಿಹೋಗಿರುವ ರಸ್ತೆಯನ್ನು ಕೆಲವರು ಸಮತಟ್ಟು ಮಾಡುವ ಕಾರ್ಯದಲ್ಲಿ ತೊಡಗಿದ್ದರೆ, ಇನ್ನುಳಿದ ರೈತರು ಸಲಿಕೆ, ಗುದ್ದಲಿ, ಹಾರೆ ಹಿಡಿದು ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದು ಕಂಡುಬಂತು. ಈಗಿನ ರಸ್ತೆ ಎತ್ತಿನ ಗಾಡಿ, ವಾಹನ, ಜನರ ಓಡಾಟಕ್ಕೆ ಯೋಗ್ಯವಿಲ್ಲದ್ದರಿಂದ 200 ರಿಂದ 300 ರೈತರು ಬೇರೊಬ್ಬರ ಹೊಲದಲ್ಲಿ ರಸ್ತೆ ಮಾಡಿಕೊಂಡು ಸಂಚರಿಸುತ್ತಿದ್ದರು.

ವಿಷಯ ತಿಳಿದು ತಹಸೀಲ್ದಾರ್ ಜಿ.ಅನಿಲ್‌ಕುಮಾರ್ ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ತಾಪಂ ಇಒಗೆ ಕರೆ ಮಾಡಿ ನರೇಗಾದಲ್ಲಿ ರಸ್ತೆ ದುರಸ್ತಿ ಮಾಡಿಸುವಂತೆ ಸೂಚಿಸಿದರು.