ಕೊಟ್ಟೂರು: ಹಿಂದೂ ಧಾರ್ಮಿಕ ದತ್ತಿ ಇಲಾಖೆ ರಾಜ್ಯದ ಸಿ ಗ್ರೇಡ್ ದೇವಾಲಯಗಳ ಅರ್ಚಕರಿಗೆ ವರ್ಷಾಸನ ಮೊತ್ತವನ್ನು 2024ನೇ ಸಾಲಿನಲ್ಲಿ ಕನಿಷ್ಠ 60 ಸಾವಿರ ರೂ. ಹೆಚ್ಚಿಸಿ ಆದೇಶ ಹೊರಡಿಸಿದೆ ಎಂದು ಅಖಿಲ ಕರ್ನಾಟಕ ಅರ್ಚಕ, ಆಗಮಿಕ, ಉಪಾಧಿವಂತರ ಕೊಟ್ಟೂರು ತಾಲೂಕು ಘಟಕದ ಅಧ್ಯಕ್ಷ ಪಿ. ವೀರಭದ್ರಪ್ಪ ತಿಳಿಸಿದರು.
ಪಟ್ಟಣದಲ್ಲಿ ವಿಜಯವಾಣಿ ಪತ್ರಿಕೆಯೊಂದಿಗೆ ಶುಕ್ರವಾರ ಮಾತನಾಡಿ, ಅನುದಾನದ ಕೊರತೆಯಿಂದ ವರ್ಷಾಸನದ 48 ಸಾವಿರ ರೂ. ಬಿಡುಗಡೆಯಾಗಿರಲಿಲ್ಲ. ಈ ಹಣವನ್ನು ಸರ್ಕಾರ ಎರಡನೇ ಕಂತಿನಲ್ಲಿ ಬಿಡುಗಡೆ ಮಾಡಿ ರಾಜ್ಯ ಆಯುಕ್ತರ ಕಚೇರಿ ಆದೇಶ ಹೊರಡಿಸಿದೆ ಎಂದು ತಿಳಿಸಿದರು.
ವರ್ಷಾಸನ ಪಡೆಯುತ್ತಿದ್ದ ಹಿಂದೂ ಧಾರ್ಮಿಕ ಸಂಸ್ಥೆಗಳಿಗೆ ಬಿಡುಗಡೆ ಮಾಡಬಹುದಾದ ಒಟ್ಟು ಅನುದಾನದಲ್ಲಿ ಶೇ.50. ಹೆಚ್ಚಿಗೆ ಮಾಡಲಾಗಿದೆ. ಈಗ ಒಟ್ಟು 9.06 ಕೋಟಿ ರೂ. ಬಿಡುಗಡೆ ಮಾಡಿ ಸಂಬಂಧಿಸಿದ ತಹಸೀಲ್ದಾರ್ ಖಾತೆಗೆ ಜಮೆ ಮಾಡಲಾಗಿದೆ. ತಹಸೀಲ್ದಾರ್ ಅವರು ಆಯಾ ಸಂಸ್ಥೆ ಮತ್ತು ದೇವಾಲಯಗಳ ಖಾತೆಯಿಂದ ಅರ್ಚಕರ ಖಾತೆಗೆ ಜಮೆ ಮಾಡುವಂತೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು. ಕಾರ್ಯದರ್ಶಿ ಮೌನಾಚಾರಿ ಇದ್ದರು.