ಬೆಳ್ಳೂಡಿ ಕಾಳಿ (ಟಗರು) ನಿಧನಕ್ಕೆ ಬೋರನಹಳ್ಳಿ ಕುರಿಗಾಹಿಗಳು ಫ್ಲೆಕ್ಸ್ ಕಟ್ಟಿ, ಹಾರ ಹಾಕಿರುವುದು. 
ಜಿಲ್ಲೆ

ಕಾಳಿ ನಿಧನಕ್ಕೆ ಕಂಬನಿ ಮಿಡಿದ ಬೋರನಹಳ್ಳಿ ಕುರಿಗಾಹಿಗಳು

ಶಾಮಸುಂದರ್ ಕೊಪ್ಪಳಕರ್

ಕೊಟ್ಟೂರು: ಖ್ಯಾತನಾಮರು ನಿಧನರಾದರೆ ಫ್ಲೆಕ್ಸ್ ಕಟ್ಟಿ ಶ್ರದ್ಧಾಂಜಲಿ ಸಲ್ಲಿಸುವುದು ಸಾಮಾನ್ಯ. ಆದರೆ, ಟಗರು ಸತ್ತಿದ್ದಕ್ಕೆ ತಾಲೂಕಿನ ಬೋರನಹಳ್ಳಿ ಕುರಿಗಾಹಿಗಳು ಫ್ಲೆಕ್ಸ್ ಕಟ್ಟಿ, ಅದಕ್ಕೆ ಹಾರ ಹಾಕಿ ಸಂತಾಪ ಸೂಚಿಸಿದ್ದಾರೆ.

ಬೆಳ್ಳೂಡಿ ಕಾಳಿ ಹೆಸರಿನ ಈ ಟಗರು ಈ ಗ್ರಾಮದ್ದಲ್ಲ, ಬದಲಿಗೆ ಹರಿಹರ ತಾಲೂಕು ಬೆಳ್ಳೂಡಿಯ ರಘು ಎಂಬುವರದು. ಸೋಮವಾರ ವಯೋ ಸಹಜದಿಂದ ಸತ್ತಿದೆ. ಟಗರು ಕಾಳಗಗಳಲ್ಲಿ ಸೋಲರಿಯದ ಸರದಾರ. ಕೊನ್ನೂರು ಕಾಳಗದಲ್ಲಿ ಹ್ಯಾಟ್ರಿಕ್ ಗೆಲವು ಸಾಧಿಸಿತ್ತು. ಸ್ಪರ್ಧೆಯಲ್ಲಿ ಬೈಕ್, ಚಿನ್ನ, ಹಣ ಸಂಪಾದಿಸಿ ತನ್ನ ಮಾಲೀಕ ರಘು ಅವರಿಗೆ ಕೀರ್ತಿ ತಂದಿತ್ತು. ಈ ಕಾಳಿಯನ್ನು ಕೊಟ್ಟೂರು ಹೋಬಳಿ ಕುರಿ ಮತ್ತು ಉಣ್ಣಿ ಉತ್ಪಾದಕರ ಸಹಕಾರ ಸಂಘದ ಮಾಜಿ ಉಪಾಧ್ಯಕ್ಷ ರಾಂಪುರ ರಾಜಪ್ಪ 10 ಲಕ್ಷ ರೂ.ಗೆ ಕೇಳಿದ್ದರೂ ರಘು ಕೊಟ್ಟಿರಲಿಲ್ಲ. ಬಹಳಷ್ಟು ಜನರು ಬೇಕಾದಷ್ಟು ಹಣ ಕೊಡಲು ಮುಂದಾಗಿದ್ದರೂ ರಘು ಮನಸ್ಸು ಮಾಡಿರಲಿಲ್ಲ ಎನ್ನುತ್ತಾರೆ ಕಾಳಿ ಅಭಿಮಾನಿಗಳಾದ ಪ್ರವೀಣ್, ನಾಗರಾಜ್, ಚನ್ನಬಸಪ್ಪ, ದುರುಗೇಶ, ಕೊಟ್ರೇಶ.