ಕೊಟ್ಟೂರು: ಶಿಲ್ಪಿ ಕಲ್ಲೊಂದನ್ನು ಕೆತ್ತಿ ಸುಂದರ ಮೂರ್ತಿಯಾಗಿಸುವಂತೆ ವಿದ್ಯಾರ್ಥಿಯನ್ನು ತಿದ್ದಿ ತೀಡಿ ಕಲಿಸುವ ಕಾರ್ಯ ಶಿಕ್ಷಕರು ಮಾಡುತ್ತಾರೆ. ಹೀಗಾಗಿ ಅವರ ವೃತ್ತಿಗೆ ಹೆಚ್ಚಿನ ಗೌರವವಿದೆ ಎಂದು ಶಾಸಕ ಕೆ.ನೇಮಿರಾಜ ನಾಯ್ಕ ಹೇಳಿದರು.
ಪಟ್ಟಣದಲ್ಲಿ ಶನಿವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಕರು ಸಮಾ ಸಮಾಜ ನಿರ್ಮಾಣದ ನೈತಿಕ ಮೌಲ್ಯಗಳನ್ನು ಮಕ್ಕಳಿಗೆ ಕಲಿಸಬೇಕು ಎಂದ ಅವರು, ಸರ್ಕಾರಿ ಶಾಲೆಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ಮೂಲಕ ಪ್ರವೇಶಾತಿ ಹೆಚ್ಚಳಕ್ಕೆ ಶ್ರಮಿಸಲಾಗುವುದು. ಪಟ್ಟಣದಲ್ಲಿ ಆಡಳಿತ ಸೌಧ, ನೂರು ಹಾಸಿಗೆ ಆಸ್ಪತ್ರೆ ಸೇರಿದಂತೆ ತಾಲೂಕು ಮಟ್ಟದ ಎಲ್ಲ ಕಚೇರಿಗಳನ್ನು ತರುವಂತಹ ಕಾರ್ಯ ಮಾಡುವೆ ಎಂದರು.
ನಿವೃತ್ತ ಉಪನ್ಯಾಸಕ ಡಾ.ಬಿ.ಸಿ.ಮಹಾಬಲೇಶ್ವರಪ್ಪ, ಇಒ, ರವಿಕುಮಾರ್ ವೈ.ಕೆ., ಬಿಇಒಗಳಾದ ಮೈಲೇಶ್ ಬೇವೂರ, ಪದ್ಮನಾಭ ಕರ್ಣಂ ಮಾತನಾಡಿದರು. ಇತ್ತೀಚೆಗೆ ಅಪಘಾತದಲ್ಲಿ ಮೃತಪಟ್ಟ ಶಿಕ್ಷಕರ ಸಂಘದ ಕಾರ್ಯದರ್ಶಿ ಪ್ರಕಾಶ್ ಅವರ ತಾಯಿ ಸುವರ್ಣಮ್ಮ ಮತ್ತು ಶರಣ್ಯ ಅವರನ್ನು ಸನ್ಮಾನಿಸಲಾಯಿತು. ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಅಣಜಿ ಸಿದ್ದಲಿಂಗಪ್ಪ, ಬಿಆರ್‌ಸಿ ವೀರಭದ್ರಪ್ಪ, ಪ್ರಮುಖರಾದ ಜಯಪ್ಪ, ನಿಂಗಪ್ಪ, ಆನಂದ ದೇವರಕೊಳದ, ಸಿ.ಬಸವರಾಜ ಇತರರಿದ್ದರು.