ಜಿಲ್ಲೆ

ಸೀಲ್‌ಡೌನ್ ಆಗಿದ್ದ ಕೊಟ್ಟೂರು ಪೊಲೀಸ್ ಠಾಣೆ 14 ದಿನಗಳ ನಂತರ ಪುನರಾರಂಭ

ಕೊಟ್ಟೂರು: ಪೇದೆಗೆ ಕರೊನಾ ಸೋಂಕು ದೃಢಪಟ್ಟಿದ್ದರಿಂದ ಸೀಲ್‌ಡೌನ್ ಆಗಿದ್ದ ಪಟ್ಟಣ ಪೊಲೀಸ್ ಠಾಣೆ 14 ದಿನಗಳ ನಂತರ ಸೋಮವಾರ ಪುನರಾರಂಭವಾಗಿದೆ.

ಠಾಣೆಯನ್ನು ಸಂಪೂರ್ಣ ರೋಗ ನಿರೋಧಕ ದ್ರಾವಣ ಮಿಶ್ರಿತ ನೀರನ್ನು ಸಿಂಪಡಿಸಲಾಯಿತು. ಬಳಿಕ ಕೊಟ್ಟೂರೇಶ್ವರ ಸ್ವಾಮಿ ಫೋಟೋಗೆ ಪೂಜೆ ಸಲ್ಲಿಸಿ ಠಾಣೆಯ ಬಾಗಿಲು ತೆರೆಯಲಾಯಿತು. ಕ್ವಾರಂಟೈನ್‌ನಿಂದ ಬಿಡುಗಡೆಯಾದ ಪಿಎಸ್‌ಐ ಎ.ಕಾಳಿಂಗ ಸೇರಿ 40 ಜನ ಪೊಲೀಸ್ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಠಾಣೆ ಸೀಲ್‌ಡೌನ್ ಆಗಿದ್ದಾಗ ಕಾನಹೊಸಹಳ್ಳಿ ಪಿಎಸ್‌ಐ ನಾಗರಾಜ್ ಹಾಗೂ ಮರಿಯಮ್ಮನಹಳ್ಳಿ, ಸಂಡೂರು, ಕೂಡ್ಲಿಗಿ, ಟಿಬಿ ಡ್ಯಾಂ ಪೊಲೀಸರು ಕರ್ತವ್ಯ ನಿರ್ವಹಿಸಿದ್ದರು. ಸೋಂಕಿನಿಂದ ಗುಣರಾದ ಪೇದೆ ಹಾಗೂ ಠಾಣೆಯ ಎಲ್ಲ ಸಿಬ್ಬಂದಿಯೂ ಆರೋಗ್ಯವಾಗಿದ್ದಾರೆ ಎಂದು ಪಿಎಸ್‌ಐ ಕಾಳಿಂಗ ತಿಳಿಸಿದರು.