ಜಿಲ್ಲೆ

ಕೋಟ್ಪಾ ಉನ್ನತ ಅನುಷ್ಠಾನ : ವಿಶಿಷ್ಟ ಗೌರವಕ್ಕೆ ಪಾತ್ರವಾದ ಚಿಕ್ಕಬಳ್ಳಾಪುರ

Chikkaballapur

ಚಿಕ್ಕಬಳ್ಳಾಪುರ: ಕೋಟ್ಪಾ-2003ರ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ‘ಚಿಕ್ಕಬಳ್ಳಾಪುರ ಉನ್ನತ ಅನುಷ್ಠಾನದ ಜಿಲ್ಲೆ’ ಎಂದು ೋಷಿಸಿಕೊಳ್ಳುವ ಮೂಲಕ ತಂಬಾಕು ನಿಯಂತ್ರಣಕ್ಕೆ ಸದೃಢ ಹೆಜ್ಜೆಯನ್ನರಿಸಿದೆ.

ಜಿಲ್ಲಾಡಳಿತ ಭವನದಲ್ಲಿ ಸೋಮವಾರ ತಂಬಾಕು ನಿಯಂತ್ರಣ ಕಾರ್ಯಕ್ರಮದ ತ್ರೈಮಾಸಿಕ ಸಭೆಯಲ್ಲಿ ಜಿಲ್ಲಾಧಿಕಾರಿ ಆರ್.ಲತಾ, ಕಾಯ್ದೆಗೆ ಸಂಬಂಧಿಸಿದಂತೆ ಅನುಸರಣಾ ಸಮೀಕ್ಷಾ ವರದಿ 2020-21ರ ಆಧಾರದ ಮೇಲೆ ಜಿಲ್ಲೆಗೆ ಉನ್ನತ ಅನುಷ್ಠಾನ ಜಿಲ್ಲೆ ಎಂಬುದಾಗಿ ಘೋಷಿಸಿ, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಅಭಿನಂದನಾ ಪತ್ರಗಳನ್ನು ವಿತರಿಸಿದರು.

ಜಿಲ್ಲೆಯ ಕನಿಷ್ಠ ಯಾವುದಾದರೂ ಒಂದು ಹಳ್ಳಿಯನ್ನು ತ್ವರಿತವಾಗಿ ತಂಬಾಕು ವ್ಯಸನಮುಕ್ತ ಪ್ರದೇಶವನ್ನಾಗಿ ಘೋಷಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗೊಳ್ಳುವಂತೆ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.

ರಾಜ್ಯದ 15 ಜಿಲ್ಲೆಗಳು ಕೋಟ್ಪಾ ಕಾಯ್ದೆಯನ್ನು ಉನ್ನತಮಟ್ಟದಲ್ಲಿ ಅನುಷ್ಠಾನ ಮಾಡಿದ ಪ್ರದೇಶವನ್ನಾಗಿ ಆಯಾ ಜಿಲ್ಲಾಡಳಿತಗಳು ಈಗಾಗಲೇ ಘೋಷಿಸಿಕೊಂಡಿವೆ. ಈ ಸಾಲಿನಲ್ಲಿ ಚಿಕ್ಕಬಳ್ಳಾಪುರವೂ ಸೇರ್ಪಡೆಯಾಗಿರುವುದು ಖುಷಿಯ ವಿಚಾರ ಎಂದು ರಾಜ್ಯ ತಂಬಾಕು ನಿಯಂತ್ರಣ ಘಟಕದ ಯೋಜನಾ ವ್ಯವಸ್ಥಾಪಕ ಪ್ರಭಾಕರ್ ನುಡಿದರು.

ರಾಜ್ಯದಲ್ಲಿ ತಂಬಾಕು ವಿವಿಧ ಉತ್ಪನ್ನಗಳನ್ನು ಸೇವಿಸುವ 2.5 ಕೋಟಿ ಜನರಿದ್ದಾರೆ. ಇದರಿಂದ ತಂಬಾಕು ಸೇವಿಸದವವರೂ ಪರೋಕ್ಷವಾಗಿ ದುಷ್ಪರಿಣಾಮ ಎದುರಿಸಬೇಕಾದ ಸಾಧ್ಯತೆ ಹೆಚ್ಚಿರುವುದರಿಂದ ಕೋಟ್ಪಾ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕಾಗಿದೆ ಎಂಬ ಅಭಿಪ್ರಾಯಪಟ್ಟರು. ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದಿರಾ ಆರ್ ಕಬಾಡೆ, ಜಿಪಂ ಉಪಕಾರ್ಯದರ್ಶಿ ಶಿವಕುಮಾರ್ ಮತ್ತಿತರರು ಇದ್ದರು.

323 ಶಾಲಾ ಕಾಲೇಜುಗಳ ಅರಿವು: ಜಿಲ್ಲಾದ್ಯಂತ ಏಕಕಾಲದಲ್ಲಿ ‘ಗುಲಾಬಿ ಆಂದೋಲನ’ ವಿನೂತನವಾದ ಕಾರ್ಯಕ್ರಮ ಕೈಗೊಂಡಿದ್ದು ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ 323 ಶಾಲಾ ಕಾಲೇಜುಗಳಲ್ಲಿನ 44,019 ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗಿದೆ. ಜತೆಗೆ ತಂಬಾಕು ಉತ್ಪನ್ನ ವ್ಯಾಪಾರಿಗೆ ಕೋಟ್ಪಾ ಕಾಯ್ದೆ ಪಾಲನೆಯ ಬಗ್ಗೆ ಸೂಚಿಸಲಾಗಿದೆ. ಈಗಾಗಲೇ ತಂಬಾಕು ವ್ಯಸನದಿಂದ ಮುಕ್ತಗೊಳಿಸಲು ಜಿಲ್ಲಾಸ್ಪತ್ರೆಯಲ್ಲಿ ತಂಬಾಕು ವ್ಯಸನಮುಕ್ತ ಕೇಂದ್ರ ಕಾರ್ಯ ನಿರ್ವಹಿಸುತ್ತಿದ್ದು, ಉಚಿತ ಆಪ್ತಸಮಾಲೋಚನೆ ಹಾಗೂ ಚಿಕಿತ್ಸೆ ಸೌಲಭ್ಯ ಸಿಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

17,598 ಪ್ರಕರಣ ದಾಖಲು: ಜಿಲ್ಲೆಯ ವಿವಿಧೆಡೆ ದಾಳಿಗಳನ್ನು ನಡೆಸಿ 17,598 ಪ್ರಕರಣಗಳನ್ನು ದಾಖಲು ಮಾಡಿದ್ದು 12,41,357 ರೂ. ಸಂಗ್ರಹವಾಗಿದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಹಾಗೂ ತಾಲೂಕುಮಟ್ಟದಲ್ಲಿ ತನಿಖಾದಳಗಳನ್ನು ರಚಿಸಲಾಗಿದ್ದು, 931 ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ಕಂದಾಯ, ಆರೋಗ್ಯ, ಪೊಲೀಸ್, ಅಬಕಾರಿ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ನಗರಾಭಿವೃದ್ಧಿ ಸೇರಿ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಕಾರ್ಯಾಚರಣೆ ಕೈಗೊಳ್ಳುತ್ತಿದ್ದು ಇದೇ ವೇಳೆ ಸಾರ್ವಜನಿಕರಿಗೆ ತಂಬಾಕು ಸೇವನೆ ದುಷ್ಪರಿಣಾಮ ಹಾಗೂ ಕೋಟ್ಪಾ ಕಾಯ್ದೆಯ ಅರಿವು ಮೂಡಿಸಲಾಗುತ್ತಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಯಲ್ಲಾ ರಮೇಶ್ ಬಾಬು ತಿಳಿಸಿದರು.

ಸುಬ್ಬಯ್ಯ ಮೆಡಿಕಲ್ ಕಾಲೇಜ್ ಸಮೀಕ್ಷೆ: ಶಿವಮೊಗ್ಗ ಜಿಲ್ಲೆಯ ಸುಬ್ಬಯ್ಯ ಮೆಡಿಕಲ್ ಕಾಲೇಜು ಇತ್ತೀಚೆಗೆ ಸಮೀಕ್ಷೆ ನಡೆಸಿದೆ. ಇದರಲ್ಲಿ ಕೋಟ್ಟಾ-2003 ಕಾಯ್ದೆಯನ್ನು ಪರಿಣಾಮಕಾರಿ ಅನುಷ್ಠಾನಗೊಳಿಸುವಲ್ಲಿ ಚಿಕ್ಕಬಳ್ಳಾಪುರ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿದೆ ಎಂದು ಹೇಳಲಾಗಿದೆ.