ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ
ಧೂಮಪಾನದ ಚಟ ಸಮಾಜದ ಇತರರ ಆರೋಗ್ಯವನ್ನೂ ಕೆಡಿಸುತ್ತದೆ ಎಂಬ ಕಾರಣಕ್ಕಾಗಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ಕಟ್ಟುನಿಟ್ಟಾಗಿ ನಿಷೇಧಿಸಿ ಜಾರಿಗೆ ತಂದಿರುವ ಕೋಟ್ಪಾ ಕಾಯಿದೆಯನ್ನು ಇತ್ತೀಚಿನ ದಿನಗಳಲ್ಲಿ ಇಲಾಖೆ ಮತ್ತು ಜನತೆ ಮರೆತಂತಿದೆ. ಎಲ್ಲೆಡೆ ಸಾರ್ವಜನಿಕವಾಗಿ ಧೂಮಪಾನ ಮಾಡುವವರು ಧಾರಾಳವಾಗಿ ಕಾಣಿಸುತ್ತಿದ್ದು, ಶುದ್ಧ ಗಾಳಿ ಸೇವಿಸುವ ನಾಗರಿಕರ ಹಕ್ಕಿಗೆ ಚ್ಯುತಿಯಾಗುತ್ತಿರುವ ಬಗ್ಗೆ ಸಾರ್ವಜನಿಕ ವಲಯದಿಂದ ಅಸಮಾಧಾನ ವ್ಯಕ್ತವಾಗಿದೆ.
ಕೆಲ ವರ್ಷಗಳ ಹಿಂದೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ನಿಷೇಧಿಸಿದೆ ಎಂಬ ಸೂಚನಾ ಫಲಕವನ್ನು ಎಲ್ಲ ಅಂಗಡಿ ಮುಂಗಟ್ಟುಗಳಲ್ಲಿ ಕಡ್ಡಾಯವಾಗಿ ಅಳವಡಿಸುವ ನಿಯಮವನ್ನು ಸ್ಥಳೀಯ ಆಡಳಿತ ಜಾರಿಗೊಳಿಸಿತ್ತು. ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಿದವರಿಗೆ ದಂಡ ವಿಧಿಸಲಾಗುತ್ತಿತ್ತು. ಆ ಸಮಯದಲ್ಲಿ ಒಂದಷ್ಟು ಶುದ್ಧ ಗಾಳಿ ಸೇವಿಸಲು ಅವಕಾಶ ಲಭಿಸಿದ್ದು, ಕಾಯಿದೆಯ ಪ್ರಯೋಜನ ನಾಗರಿಕರಿಗೆ ಲಭಿಸಿತ್ತು.
ಆದರೆ ದಿನಗಳು ಕಳೆದಂತೆ ಸೂಚನಾ ಫಲಕಗಳು ಮರೆಯಾದವು. ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವ ಕೃತ್ಯಗಳು ದಂಡನೆಯಿಂದ ವಿಮುಖವಾದವು. ಅಂಗಡಿಮುಂಗಟ್ಟುಗಳಲ್ಲಿಯೇ ರಾಜಾರೋಷವಾಗಿ ಬೀಡಿ-ಸಿಗರೇಟ್ ಸೇದುವ, ಪರಿಸರದಲ್ಲಿ ತಂಬಾಕಿನ ಕೆಟ್ಟ ಹೊಗೆ ಬಿಟ್ಟು ಧೂಮಪಾನ ಮಾಡದದವರಿಗೂ ಧೂಮಪಾನದ ದುಷ್ಪರಿಣಾಮವನ್ನು ಲಭಿಸುವಂತೆ ಮಾಡಲಾಗುತ್ತಿದೆ.
ಕಾನೂನು ಪಾಲನೆಯನ್ನು ಮರೆತ ಕಾರಣಕ್ಕೆ ಜನತೆ ಯಾವ ಮಟ್ಟಕ್ಕೆ ನಿರ್ಭೀತಿಯಿಂದ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುತ್ತಿದ್ದರೆಂದರೆ, ಶುದ್ಧ ಗಾಳಿ ಸೇವನೆಗಾಗಿ ಮುಂಜಾನೆಯ ವಾಕಿಂಗ್ ಸಮಯದಲ್ಲೂ ತಂಬಾಕಿನ ಹೊಗೆ ಬೆರೆತ ಗಾಳಿಯನ್ನು ಸೇವಿಸಬೇಕಾಗುತ್ತದೆ. ಎಲ್ಲೆಡೆಯಲ್ಲೂ ಧೂಮಪಾನ ಅಡೆತಡೆಯಿಲ್ಲದೆ ನಡೆಯುತ್ತಿದೆ.
ಪೊಲೀಸ್ ಇಲಾಖೆ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಂಡು ಆರೋಗ್ಯಪೂರ್ಣ ಪರಿಸರದಲ್ಲಿ ಬದುಕುವ ಜನತೆಯ ಹಕ್ಕನ್ನು ರಕ್ಷಿಸಬೇಕಾಗಿದೆ. ಸ್ಥಳೀಯ ಆಡಳಿತ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವ ಮತ್ತು ಮಾಡಲು ಪ್ರೋತ್ಸಾಹ ನೀಡುವ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ.
ಪೇಟೆಯಲ್ಲಿ ಹಲವೆಡೆ ಅಂಗಡಿಮುಂಗಟ್ಟುಗಳ ಬಳಿ ಜನ ಗುಂಪಾಗಿ ಧೂಮಪಾನ ಮಾಡುತ್ತಿರುವುದರಿಂದ ಇಡೀ ಪರಿಸರದಲ್ಲಿ ತಂಬಾಕಿನ ಹೊಗೆ ದಟ್ಟವಾಗಿ ವ್ಯಾಪಿಸಿ ಆ ರಸ್ತೆಯಲ್ಲಿ ನಡೆದಾಡಲು ಅಸಾಧ್ಯವಾಗುವ ಸ್ಥಿತಿ ಇದೆ. ಇಂಥ ಸ್ಥಳದಲ್ಲಿ ನಡೆದಾಡುವಾಗ ಉಸಿರು ಕಟ್ಟಿದಂತಾಗುತ್ತದೆ. ದಯವಿಟ್ಟು ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಬಾರದೆಂಬ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಲ್ಲಿ ಸಂಬಂಧಪಟ್ಟ ಇಲಾಖೆ ಇಚ್ಚಾಶಕ್ತಿಯನ್ನು ತೋರಬೇಕೆಂದು ಉಪ್ಪಿನಂಗಡಿಯ ಗೃಹಿಣಿ ಸುಜಾತ ಆಗ್ರಹಿಸಿದ್ದಾರೆ.
ಕೋಟ್ಪಾ ಕಾಯಿದೆಯ ಅನುಸಾರ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲು ತಹಸೀಲ್ದಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ಪಂಚಾಯಿತಿ ಪಿಡಿಒ, ಶಾಲಾ ಮುಖ್ಯಶಿಕ್ಷಕ, ವೈದ್ಯಾಧಿಕಾರಿ, ಪೊಲೀಸ್ ಇಲಾಖೆ ಸೇರಿದಂತೆ ಹಲವಾರು ಮಂದಿಗೆ ಅಧಿಕಾರ ಪ್ರಾಪ್ತವಾಗಿದೆ. ಕೇವಲ ಪೊಲೀಸ್ ಇಲಾಖೆಯೊಂದರಿಂದಲೇ ಎಲ್ಲವನ್ನೂ ನಿರೀಕ್ಷಿಸಬಾರದು. ಪೊಲೀಸ್ ಸಮವಸ್ತ್ರ ಕಂಡಾಕ್ಷಣ ಧೂಮಪಾನಿಗಳು ಪಲಾಯನಗೈಯ್ಯುತ್ತಾರೆ. ಉಳಿದ ಇಲಾಖೆಯವರೂ ಇದರ ಬಗ್ಗೆ ಕಾರ್ಯೋನ್ಮುಖರಾಗಬೇಕು. ಮುಖ್ಯವಾಗಿ ಹೊರರಾಜ್ಯಗಳಿಂದ ಬಂದ ಕಾರ್ಮಿಕರು ವಾಸವಾಗಿರುವಲ್ಲಿ, ಗುಂಪಾಗಿ ಧೂಮಪಾನ ಮಾಡುವುದರಿಂದ ಅಲ್ಲಿನ ಇಡೀ ಪರಿಸರದ ತಂಬಾಕು ಹೊಗೆಯಿಂದ ಮಲಿನವಾಗುತ್ತಿದೆ. ಇದಕ್ಕೆ ವಸತಿಯ ಮಾಲೀಕರನ್ನು ಹೊಣೆಯಾಗಿಸುವಲ್ಲಿ ಪಿಡಿಒ ಗಮನಹರಿಸಬೇಕು. ಕಾರ್ಯದೊತ್ತಡಗಳಿಂದಾಗಿ ಪೊಲೀಸ್ ಇಲಾಖೆ ಕೋಟ್ಪಾ ಕಾಯಿದೆಯ ಬಗ್ಗೆ ವಿಶೇಷ ನಿಗಾವಿರಿಸಿಲ್ಲ ನಿಜ. ಆದರೂ ಕೃತ್ಯ ಕಂಡಾಕ್ಷಣ ದಂಡ ವಿಧಿಸಲಾಗುತ್ತಿದೆ ಎಂದು ಪುತ್ತೂರು ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ರವಿ ಬಿ.ಎಸ್.ಪ್ರತಿಕ್ರಿಯಿಸಿದ್ದಾರೆ.
ನಡೆದಾಡುವಾಗ ಬೀದಿ ತುಂಬಾ ತಂಬಾಕು ಹೊಗೆಯನ್ನೇ ಸೇವಿಸಬೇಕಾದ ದುಸ್ಥಿತಿ ನಿರ್ಮಾಣವಾಗಿದ್ದು, ನನಗೆ ತಂಬಾಕು ಹೊಗೆ ಅಲರ್ಜಿಯನ್ನುಂಟು ಮಾಡುತ್ತಿದೆ. ಇದರಿಂದಾಗಿ ನಾನು ಪದೇಪದೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇನೆ. ಪರಿಸರವನ್ನು ತಂಬಾಕು ಹೊಗೆ ಮುಕ್ತವಾಗುವಂತೆ ಮಾಡಿ ಶುದ್ಧ ಗಾಳಿ ಸೇವನೆಯ ನಮ್ಮ ಹಕ್ಕನ್ನು ರಕ್ಷಿಸಬೇಕು. - ಸಮೃದ್ಧ, 8ನೇ ತರಗತಿಯ ವಿದ್ಯಾರ್ಥಿ https://www.vijayavani.net/heavy-rain-in-uppinangady