ಜಿಲ್ಲೆ

ಕೋಟೆನಾಡು ದಸರಾ ಮಾದರಿ ಸಿಂಗಾರ

ಚಿತ್ರದುರ್ಗ: ರಾಜ್ಯದಲ್ಲೇ ಅತಿ ಹೆಚ್ಚು ಜನರು ಭಾಗವಹಿಸುವ ಹಿನ್ನೆಲೆಯಲ್ಲಿ ನಾಡು ಮತ್ತು ದೇಶದ ಗಮನಸೆಳೆದಿರುವ ಕೋಟೆನಾಡಿನ ಹಿಂದು ಮಹಾಗಣಪತಿ ಉತ್ಸವದ ಶೋಭಾಯಾತ್ರೆಗೆ ಕ್ಷಣಗಣನೆ ಶುರುವಾಗಿದೆ…

ಅ.8ರ ಭಾನುವಾರದ ಶೋಭಾಯಾತ್ರೆ ಅಂಗವಾಗಿ ಚಳ್ಳಕೆರೆ ರಸ್ತೆಯಿಂದ ಹೊಳಲ್ಕೆರೆ ರಸ್ತೆಯ ಕನಕ ವೃತ್ತದವರೆಗೂ ವಿವಿಧ ವರ್ಣಗಳಲ್ಲಿ ಕಂಗೊಳಿಸುತ್ತಿರುವ ವೈವಿಧ್ಯಮಯ ವಿದ್ಯುದ್ದೀಪಾಲಂಕಾರ ಸಾಂಸ್ಕೃತಿಕ ನಗರಿ ಮೈಸೂರು ದಸರಾವನ್ನೇ ನೆನಪು ಮಾಡುವಂತಿದ್ದು, ದಾರಿಹೋಕರನ್ನು ಆಕರ್ಷಿಸುತ್ತಿದೆ.

ಎರಡು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದ್ದು, ನಾಡಿನ ವಿವಿಧ ಕಲಾ ತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಲಿವೆ.

ಮಹಾಗಣಪನ ವಿಸರ್ಜನಾ ಮಹೋತ್ಸವಕ್ಕೆ ಇಡೀ ನಗರ ಈಗಾಗಲೇ ಕೇಸರಿಮಯವಾಗಿದೆ. ಇದಕ್ಕಾಗಿ ಸಾವಿರಾರು ಮೀಟರ್ ಕೇಸರಿ ಬಟ್ಟೆ ಬಳಸಲಾಗಿದೆ. ಮದಕರಿನಾಯಕ ಪ್ರತಿಮೆ ಹಿಂಭಾಗ ಆದಿಯೋಗಿ ಸ್ಟಾೃಚು, ಮುಂಭಾಗ ಕೋಟೆನಾಡನ್ನು ಪ್ರತಿಬಿಂಬಿಸುವ ಐತಿಹಾಸಿಕ ಒಂಟಿಕಲ್ಲು ಬಸವನ ದೇಗುಲ, ಉಯ್ಯಲೆ ಕಂಬದ ಮಾದರಿಯ ಚಿತ್ರಗಳೊಂದಿಗೆ ಕಂಗೊಳಿಸುತ್ತಿದೆ. ಶುಕ್ರವಾರ ಸಂಜೆಯ ಬಳಿಕ ಸೆಲ್ಫಿ ಕ್ರೇಜ್ ಹೆಚ್ಚಾಗಿದೆ. ಅಷ್ಟೇ ಅಲ್ಲದೆ, ವೀರವನಿತೆ ಒನಕೆ ಓಬವ್ವ, ವಾಸವಿ, ಸಂಗೊಳ್ಳಿ ರಾಯಣ್ಣ, ಮಹಾತ್ಮ ಗಾಂಧಿ, ಕನಕ ವೃತ್ತ ಜನರನ್ನು ತನ್ನತ್ತ ಸೆಳೆಯುತ್ತಿವೆ.

ಶೋಭಾಯಾತ್ರೆ ಸಾಗುವ ಮಾರ್ಗದುದ್ದಕ್ಕೂ ‘ಓಂ’, ‘ಆಂಜನೇಯಸ್ವಾಮಿ’ ಭಾವಚಿತ್ರದ ಬೃಹತ್ ಧ್ವಜಗಳನ್ನು ಕಟ್ಟಲಾಗಿದೆ. ದೀಪಾಲಂಕಾರದಿಂದ ಪ್ರಮುಖ ವೃತ್ತಗಳು, ಅಂಗಡಿ ಮುಂಗಟ್ಟುಗಳು ಝಗಮಗಿಸುತ್ತಿವೆ. ಇದಲ್ಲದೆ ಯಾತ್ರೆಗೆ ಶುಭಾಶಯ ಕೋರುವ ಬ್ಯಾನರ್, ಬಂಟಿಗ್ಸ್‌ಗಳು, ಗಣ್ಯರ, ರಾಜಕೀಯ ಮುಖಂಡರ ಆಳೆತ್ತರದ ಕಟೌಟ್‌ಗಳು ಎದ್ದು ನಿಂತಿವೆ.

ಬೆಳಗ್ಗೆ ಚಾಲನೆ: ಜೈನಧಾಮ ಬಳಿ ಪ್ರತಿಷ್ಠಾಪಿಸಿರುವ ಹಿಂದು ಮಹಾಗಣಪತಿಗೆ ಭಾನುವಾರ ಬೆಳಗ್ಗೆ 10ಕ್ಕೆ ಮಹಾಮಂಗಳಾರತಿ ಪೂಜೆ ನೆರವೇರಿಸುವ ಮೂಲಕ ಶೋಭಾಯಾತ್ರೆಗೆ ಚಾಲನೆ ಸಿಗಲಿದೆ. ಇದೇ ವೇಳೆ ವಿವಿಧ ಮಾದರಿಯ ಹೂವಿನ ಹಾರಗಳ ಹರಾಜು ಪ್ರಕ್ರಿಯೆ ನಡೆಯಲಿದೆ. ವಿವಿಧ ಮಠಾಧೀಶರು, ಜನಪ್ರತಿನಿಧಿಗಳು, ವಿಎಚ್‌ಪಿ ಮತ್ತು ಬಜರಂಗದಳದ ಪ್ರಮುಖರು ಭಾಗವಹಿಸಲಿದ್ದಾರೆ.

ಉಪಾಹಾರ ವ್ಯವಸ್ಥೆ: ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಲಕ್ಷಾಂತರ ಜನರಿಗೆ ಊಟ, ಉಪಾಹಾರ, ನೀರು ಉಚಿತ ವ್ಯವಸ್ಥೆ ಮಾಡಲು ಹಲವು ಸಂಘಟನೆಗಳು ಟೊಂಕ ಕಟ್ಟಿ ನಿಂತಿವೆ. ಶೋಭಾಯಾತ್ರೆ ಸಾಗುವ ಮಾರ್ಗ ಮಧ್ಯೆ ಪುಲಾವ್, ಪುಳಿಯೊಗರೆ, ಚಿತ್ರನ್ನ, ಮೊಸರನ್ನ, ನೀರು, ಮಜ್ಜಿಗೆ ವಿತರಿಸಲು ಸಿದ್ಧತೆಗಳು ನಡೆಯಲಿವೆ. ಬಾಣಸಿಗರು ಅ.7ರ ಶನಿವಾರ ರಾತ್ರಿಯಿಂದಲೇ ಅಡುಗೆಗೆ ಸಿದ್ಧತೆ ಆರಂಭಿಸಲಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ: ಶೋಭಾಯತ್ರೆಯು ಫೇಸ್‌ಬುಕ್, ವಾಟ್ಸ್‌ಆ್ಯಪ್ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಲಿದೆ. ನಗರದೊಳಗೆ ಕೆಎಸ್‌ಆರ್‌ಟಿಸಿ, ಖಾಸಗಿ ಬಸ್ ಸೇರಿ ಭಾರೀ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿದೆ. ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.

ಮೊಬೈಲ್, ಸರಗಳ್ಳರ ಕುರಿತು ಇರಲಿ ಎಚ್ಚರ: ಸರಗಳ್ಳರು, ಜೇಬುಗಳ್ಳರು, ಮೊಬೈಲ್ ಕಳ್ಳರು ಮೊದಲಾದ ದುಷ್ಕರ್ಮಿಗಳ ಪತ್ತೆಗೆ ವಿವಿಧ ಜಿಲ್ಲೆಗಳಿಂದ ಅಪರಾಧ ಪತ್ತೆ ವಿಭಾಗದ ಪೊಲೀಸರು ಬಂದಿಳಿದಿದ್ದಾರೆ. ಆದರೂ ಜನರು ತಮ್ಮ ಬೆಲೆ ಬಾಳುವ ವಸ್ತುಗಳ ಕುರಿತು ಎಚ್ಚರ ವಹಿಸುವಂತೆ ಪೊಲೀಸ್ ಇಲಾಖೆ ಸಲಹೆ ನೀಡಿದೆ.

ಮಾರುಕಟ್ಟೆ ಸ್ತಬ್ಧ: ಬಹುತೇಕ ಇಡೀ ಊರಿನ ವ್ಯಾಪಾರ-ವಹಿವಾಟು ಭಾನುವಾರ ಸ್ತಬ್ಧವಾಗಲಿದ್ದು, ತರಕಾರಿ, ಹಣ್ಣು, ಹೂವಿನ ಮಾರುಕಟ್ಟೆ ಕೂಡ ಇದಕ್ಕೆ ಹೊರತಾಗಿಲ್ಲ. ಗಾಂಧಿ ವೃತ್ತ, ಸಂತೆ ಹೊಂಡ, ಮೆದೇಹಳ್ಳಿ ರಸ್ತೆ ಬಳಿ ಹೆಚ್ಚು ಜನಜಂಗುಳಿ ಉಂಟಾಗುವ ನಿರೀಕ್ಷೆ ಇದೆ.