ಜಿಲ್ಲೆ

ಒಂದು ಗಂಟೆ ಚರ್ಚೆ ಬಳಿಕ ಸಭೆ ರದ್ದು! : ಅಧಿಕಾರಿಗಳ ಗೈರು ಹಾಜರಿಗೆ ಸದಸ್ಯರ ಆಕ್ರೋಶ : ಕೋಟೆಕಾರ್ ಪ.ಪಂ.ಸಾಮಾನ್ಯ ಸಭೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಕೇವಲ ಒಂದು ಗಂಟೆ ಚರ್ಚೆ, ಇಬ್ಬರು ಅಧಿಕಾರಿಗಳ ಭಾಗವಹಿಸುವಿಕೆ. ಮಾಹಿತಿ ಬಳಿಕ ರದ್ದುಗೊಂಡ ಸಾಮಾನ್ಯ ಸಭೆ. ಇದು ಶುಕ್ರವಾರ ನಡೆದ ಕೋಟೆಕಾರ್ ಪಪಂ ಸಾಮಾನ್ಯ ಸಭೆ ಚಿತ್ರಣ!

ಸಭೆ ಆರಂಭದಲ್ಲಿ ಒಂದೆರಡು ಇಲಾಖೆಯ ಅಧಿಕಾರಿಗಳು ಮಾತ್ರ ಉಪಸ್ಥಿತರಿದ್ದ ಹಿನ್ನೆಲೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಸುಜಿತ್ ಮಾಡೂರು, ಪ್ರತಿ ಬಾರಿ ಸಭೆಗೆ ಬಾರದೆ ಅಧಿಕಾರಿಗಳು ನಿರ್ಲಕ್ಷೃ ತೋರುತ್ತಿದ್ದಾರೆ. ಅಧಿಕಾರಿಗಳಿಲ್ಲದೆ ಸಭೆ ನಡೆಸಿ ಪ್ರಯೋಜನವಿಲ್ಲ. ಅರ್ಧ ಗಂಟೆಯಲ್ಲಿ ಅಧಿಕಾರಿಗಳು ಬರದಿದ್ದರೆ ಸಭೆ ರದ್ದುಪಡಿಸುವುದು ಅಗತ್ಯ ಎಂದಾಗ, ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷೆ ದಿವ್ಯಾ ಸತೀಶ್ ಶೆಟ್ಟಿ ಮತ್ತು ಮುಖ್ಯಾಧಿಕಾರಿ ಮಾಲಿನಿ ಒಪ್ಪಿಗೆ ಸೂಚಿಸಿದರು.

ತುರ್ತು ಸಭೆ ನಡೆಸದ ಬೇಸರ!: ಇತ್ತೀಚೆಗೆ ಬಂದ ಭಾರಿ ಮಳೆಯಿಂದಾಗಿ 139 ಮನೆಗಳಿಗೆ ನೀರು ನುಗ್ಗಿದೆ. ಇದು ಗಂಭೀರ ಸಮಸ್ಯೆಯಾದರೂ ಪ.ಪಂ.ನಿಂದ ತುರ್ತು ಸಭೆ ನಡೆಸಿ ತಕ್ಷಣಕ್ಕೆ ಸ್ಪಂದಿಸಲು ಸಾಧ್ಯವಾಗಲಿಲ್ಲ ಎಂದು ಅಹ್ಮದ್ ಅಜ್ಜಿನಡ್ಕ ಬೇಸರ ವ್ಯಕ್ತಪಡಿಸಿದರು. ತಾವು ಎಲ್ಲ ಕಡೆ ಹೋಗಿದ್ದಾಗಿ ಅಧ್ಯಕ್ಷೆ ತಿಳಿಸಿದರು. ತುರ್ತು ಸಭೆ ಕರೆದು ಸಮಯ ವ್ಯರ್ಥ ಮಾಡುವ ಬದಲು ನಾವೇ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳೋಣ ಎಂದು ಅಧ್ಯಕ್ಷರಿಗೆ ತಿಳಿಸಿದ್ದರಿಂದ ಸೂಕ್ತ ಕ್ರಮ ಆಗಿದೆ ಎಂದು ಸುಜಿತ್ ಸಭೆ ನಡೆಸದ ಬಗ್ಗೆ ಸಮಜಾಯಿಷಿ ನೀಡಿದರು.

ಶುಕ್ರವಾರ ಸಭೆ ಇಡಬೇಡಿ: 11.30ರವರೆಗೆ ಸಭೆಯಲ್ಲಿ ಭಾಗವಹಿಸಿದ್ದ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಮೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು. ಬಳಿಕ ಸಭೆಯನ್ನು ಅರ್ಧ ಗಂಟೆ ಮುಂದೂಡಿ ಅಧಿಕಾರಿಗಳನ್ನು ಕಾಯಲಾಯಿತು. ಸದಸ್ಯ ಅಹ್ಮದ್ ಅಜ್ಜಿನಡ್ಕ ಮಾತನಾಡಿ, ದಯವಿಟ್ಟು ಶುಕ್ರವಾರ ಸಭೆ ಇಡಬೇಡಿ ಎಂದು ಮನವಿ ಮಾಡಿದರು. ನಾವು ಯಾವತ್ತೂ ಶುಕ್ರವಾರ ಸಭೆ ಇಟ್ಟಿಲ್ಲ. ಇಂದಿನ ಸಭೆ 10 ಗಂಟೆಗೆ ನಿಗದಿಪಡಿಸಿ ನಾವು ಸರಿಯಾದ ಸಮಯಕ್ಕೆ ಬಂದಿದ್ದೇವೆ. ಸದಸ್ಯರೂ ಬರುತ್ತಿದ್ದರೆ ಸಭೆ ಬೇಗ ಆರಂಭಿಸಬಹುದಿತ್ತು ಎಂದು ಸಭೆ ವಿಳಂಬದ ಬಗ್ಗೆ ಅಧ್ಯಕ್ಷೆ ತಿಳಿಸಿದರು.

11.50ರವರೆಗೆ ಕಾದರೂ ಅಧಿಕಾರಿಗಳು ಬಾರದ ಕಾರಣ ಸಭೆ ರದ್ದು ಪಡಿಸಿದ್ದಾಗಿ, ಮುಂದಿನ ಸಭೆಯಲ್ಲೂ ಅಧಿಕಾರಿಗಳು ಗೈರಾದರೆ ಸಭೆ ನಡೆಸುವುದಿಲ್ಲ ಎಂದು ಅಧ್ಯಕ್ಷೆ ತಿಳಿಸಿದರು.

ಉಪಾಧ್ಯಕ್ಷ ಪ್ರವೀಣ್ ಬಗಂಬಿಲ, ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಶೆಟ್ಟಿ ಉಪಸ್ಥಿತರಿದ್ದರು.

ನಿಮ್ಮಷ್ಟಕ್ಕೇ ಕೆಲಸ ಮಾಡೋದಾ?

ಅಮೃತ ಯೋಜನೆಯಲ್ಲಿ ಜಾಗ ಖರೀದಿಗೆ ಯಾವುದೇ ಅನುದಾನ ಇಲ್ಲ. ಸ್ಥಳೀಯಾಡಳಿತವೇ ಜಾಗ ತೋರಿಸಬೇಕು ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿ ಶೋಭಾಲಕ್ಷ್ಮೀ ಮಾಹಿತಿ ನೀಡಿದರು. ನಿಮ್ಮಷ್ಟಕ್ಕೇ ಕೆಲಸ ಮಾಡುವುದಾ? ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತರುತ್ತೀರಾ? ನಮ್ಮ ವಾರ್ಡ್‌ನಲ್ಲಿ ಬಡವರ ನಾಲ್ಕು ಮನೆಗಳನ್ನು ಬಿಟ್ಟು ಯಾರೋ ಹಣವಂತರು ಹೇಳಿದ ಕಡೆ ಮಾತ್ರ ಕೆಲಸ ಮಾಡಿದ್ದೀರಿ. ನಿಮ್ಮ ಕೆಲಸದ ಉಸ್ತುವಾರಿಗೆ ಕರೆ ಸ್ವೀಕರಿಸುವ ಸೌಜನ್ಯ ಇಲ್ಲ. ನಮ್ಮ ವಾರ್ಡ್‌ನಲ್ಲಿ ಇದುವರೆಗೆ ತೇಪೆ ಕೆಲಸ ಮಾಡಿಯೇ ಇಲ್ಲ ಎಂದು ಸುಜಿತ್ ಅಸಮಾಧಾನ ವ್ಯಕ್ತಪಡಿಸಿದಾಗ ಅಧ್ಯಕ್ಷೆ ದಿವ್ಯಾ ಹಾಗೂ ಕೆಲವು ಸದಸ್ಯರು ಧ್ವನಿಗೂಡಿಸಿದರು.

ಲ್ಯಾಂಡ್ ಫೋನ್ ರಿಸೀವರ್ ಕೆಳಗಿಡುತ್ತಾರೆ!

ತುರ್ತು ಸಂದರ್ಭ ರಾತ್ರಿ ವೇಳೆ ಮೆಸ್ಕಾಂನ ದೂರವಾಣಿಗೆ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ಹೋಗಿ ನೋಡಿದರೆ ರಿಸೀವರ್ ಕೆಳಗಿಟ್ಟಿರುವುದು ಕಂಡು ಬರುತ್ತದೆ. ಬಲ್ಯದಲ್ಲಿ ನಾಲ್ಕು ಗಂಟೆಗೊಮ್ಮೆ ವಿದ್ಯುತ್ ಫ್ಯೂಸ್ ಹೋಗುವುದರಿಂದ ಹೊಸ ಟಿ.ಸಿ. ಹಾಕಿ ಸಮಸ್ಯೆಗೆ ಮುಕ್ತಿ ನೀಡಿ ಎಂದು ಸುಜಿತ್ ಮನವಿ ಮಾಡಿದರು.

ಸಮಯ ನಿಗದಿ ನಾಮ್ ಕೇ ವಾಸ್ತೆ!

ಪ.ಪಂ.ನಲ್ಲಿ 17 ಚುನಾಯಿತ ಹಾಗೂ ಮೂವರು ನಾಮನಿರ್ದೇಶಿತ ಸದಸ್ಯರಿದ್ದಾರೆ. 10 ಗಂಟೆಗೆ ಸಭೆಯ ಸಮಯ ನಿಗದಿಪಡಿಸಲಾಗಿದ್ದರೂ 10.40ಕ್ಕೆ ಆರಂಭಗೊಂಡಾಗ 10 ಸದಸ್ಯರು ಮಾತ್ರ ಉಪಸ್ಥಿತರಿದ್ದರು. ಸಭೆ ಆರಂಭಗೊಂಡ 10-20 ನಿಮಿಷದ ಬಳಿಕ ಒಬ್ಬೊಬ್ಬರೇ ಸದಸ್ಯರು ಆಗಮಿಸಿದ್ದರಿಂದ ಒಂದು ಗಂಟೆ ಅವಧಿಯಲ್ಲಿ ಚುನಾಯಿತ 14 ಮತ್ತು ನಾಮನಿರ್ದೇಶಿತ ಒಬ್ಬರ ಸಹಿತ ಸದಸ್ಯರ ಸಂಖ್ಯೆ 16ಕ್ಕೆ ತಲುಪಿತು.