ಜಿಲ್ಲೆ

5 ತಿಂಗಳ ಬಳಿಕ ಮೀಸಲಾತಿ ಪಟ್ಟಿ: ಜನಪ್ರತಿನಿಧಿಗಳಿಲ್ಲದ ಕೋಟೆಕಾರ್ ಪಟ್ಟಣ ಪಂಚಾಯಿತಿ

ಆನ್ಸಾರ್ ಇನೋಳಿ ಉಳ್ಳಾಲ

ಕೋಟೆಕಾರ್ ಪಟ್ಟಣ ಪಂಚಾಯಿತಿಯಲ್ಲಿ ಆಡಳಿತಗಾರರಿಲ್ಲದೆ ಐದು ತಿಂಗಳು ಕಳೆದಿದ್ದು, ಇದೀಗ ಮೀಸಲಾತಿ ಪಟ್ಟಿ ಪ್ರಕಟಗೊಂಡಿದೆ. ಈ ಬಾರಿಯಾದರೂ ಬಿಜೆಪಿ ಗೆಲುವಿಗೆ ತಡೆ ಹೇರಬೇಕೆನ್ನುವ ಕನಸು ಕಾಂಗ್ರೆಸ್‌ನದ್ದು.

ಕೋಟೆಕಾರ್ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ಬಳಿಕ 2016 ಏಪ್ರಿಲ್‌ನಲ್ಲಿ ಚುನಾವಣೆ ನಡೆದಿತ್ತು. ಗ್ರಾಮ ಪಂಚಾಯಿತಿಯಾಗಿದ್ದ ಸಂದರ್ಭದಲ್ಲೂ ಕೈಯಲ್ಲಿದ್ದ ಅಧಿಕಾರವನ್ನು ಉಳಿಸಿಕೊಳ್ಳುವಲ್ಲಿ ಬಿಜೆಪಿ ಸಫಲವಾಗಿತ್ತು. 17 ಸದಸ್ಯ ಬಲದ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ 11, ಕಾಂಗ್ರೆಸ್ 4, ಎಸ್‌ಡಿಪಿಐ ಮತ್ತು ಸಿಪಿಐಎಂ ತಲಾ ಒಂದೊಂದು ಸ್ಥಾನ ಪಡೆದುಕೊಂಡಿತ್ತು.

ಮಂಗಳೂರು ಕ್ಷೇತ್ರದಲ್ಲಿ ಈವರೆಗೂ ಕೋಟೆಕಾರ್, ಸೋಮೇಶ್ವರ ಮತ್ತು ತಲಪಾಡಿಯಲ್ಲಿ ಬಿಜೆಪಿ ಪ್ರಾಬಲ್ಯ ಮೆರೆಯುತ್ತಿದೆ. ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲೂ ಇಲ್ಲಿ ಬಿಜೆಪಿ ಮುನ್ನಡೆ ಸಾಧಿಸುವುದು ಸಾಮಾನ್ಯ. ಅದರಂತೆ ಸ್ಥಳೀಯಾಡಳಿತದಲ್ಲೂ ಬಿಜೆಪಿ ಸೋಲಿಸುವುದು ಸುಲಭದ ಮಾತಲ್ಲ. ಆದರೆ ಈ ಬಾರಿ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಆಡಳಿತ ಮುಂದಿಟ್ಟುಕೊಂಡು ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಪಣ ತೊಟ್ಟಿದೆ. ಆದರೆ ಕಾಂಗ್ರೆಸ್ ಕನಸಿಗೆ ಎಸ್‌ಡಿಪಿಐ ತಡೆಯಾಗಿದೆ.

ಅಧ್ಯಕ್ಷರೇ ಇಲ್ಲದೆ ಎರಡು ವರ್ಷ!: ಕಳೆದ ಬಾರಿ ಮೊದಲ ಅವಧಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಸುಲಲಿತವಾಗಿ ನಡೆದಿತ್ತು. ಆದರೆ ಎರಡನೇ ಬಾರಿ ಬಂದ ಮೀಸಲಾತಿ ಪಟ್ಟಿಯಿಂದ ಪಂಚಾಯಿತಿಯಲ್ಲಿ ಎರಡು ವರ್ಷ ಅಧ್ಯಕ್ಷರೇ ಇಲ್ಲದ ಸ್ಥಿತಿ ನಿರ್ಮಾಣವಾಗಿತ್ತು. ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಎಸ್ಟಿ ಮೀಸಲಾತಿ ಬಂದಿತ್ತು. ಆದರೆ ಈ ಸಮಯದಾಯದ ಅಭ್ಯರ್ಥಿ ಯಾವುದೇ ಪಕ್ಷದಲ್ಲೂ ಇಲ್ಲದ ಕಾರಣ ಅಧ್ಯಕ್ಷ ಸ್ಥಾನ ಖಾಲಿಯಾಗಿತ್ತು. ಎರಡು ವರ್ಷಗಳ ಬಳಿಕ ಹೊಸ ಮೀಸಲಾತಿ ಪಟ್ಟಿ ಬಂದಿದ್ದು, ನೂತನ ಅಧ್ಯಕ್ಷರ ಆಯ್ಕೆ ಅವಿರೋಧವಾಗಿ ನಡೆದರೂ ಕೇವಲ ಆರು ತಿಂಗಳಿಗೆ ಮಾತ್ರ ಸೀಮಿತವಾಯಿತು.

ಅಧಿಕಾರಿಗಳಿಂದ ಆಡಳಿತ: ಪಂಚಾಯಿತಿ ಅಧಿಕಾರಾವಧಿ ಈ ವರ್ಷದ ಜೂನ್ ತಿಂಗಳಲ್ಲೇ ಮುಗಿದಿದ್ದು, ಅಧಿಕಾರಿಗಳು ಆಡಳಿತ ಚಲಾಯಿಸುತ್ತಿದ್ದಾರೆ. ಐದು ತಿಂಗಳ ಬಳಿಕ ಇದೀಗ ಮೀಸಲಾತಿ ಪ್ರಕಟಗೊಂಡಿದೆ. ಒಂದನೇ ವಾರ್ಡ್‌ನಲ್ಲಿ ಸಾಮಾನ್ಯ, 2ನೇ ವಾರ್ಡ್‌ಗೆ ಹಿಂದುಳಿದ ಎ ಮಹಿಳೆ, 3ನೇ ವಾರ್ಡ್‌ಗೆ ಹಿಂದುಳಿದ ಎ, 4ನೇ ವಾರ್ಡ್‌ಗೆ ಎಸ್ಟಿ, 5ನೇ ವಾರ್ಡ್‌ಗೆ ಸಾಮಾನ್ಯ, 6ನೇ ವಾರ್ಡ್‌ಗೆ ಹಿಂದುಳಿದ ಮಹಿಳೆ, 7ನೇ ವಾರ್ಡ್‌ಗೆ ಹಿಂದುಳಿದ ವರ್ಗ ಬಿ, 8ನೇ ವಾರ್ಡ್‌ಗೆ ಹಿಂದುಳಿದ ವರ್ಗ ಎ(ಮಹಿಳೆ), 10ನೇ ವಾರ್ಡ್‌ಗೆ ಸಾಮಾನ್ಯ, 11ನೇ ವಾರ್ಡ್‌ಗೆ ಹಿಂದುಳಿದ ವರ್ಗ ಎ, 12-13ನೇ ವಾರ್ಡ್‌ಗೆ ಸಾಮಾನ್ಯ ಮಹಿಳೆ, 14ನೇ ವಾರ್ಡ್‌ಗೆ ಎಸ್ಸಿ, 15ನೇ ವಾರ್ಡ್‌ಗೆ ಹಿಂದುಳಿದ ಎ, 16ನೇ ವಾರ್ಡ್‌ಗೆ ಸಾಮಾನ್ಯ, 17ನೇ ವಾರ್ಡ್‌ಗೆ ಸಾಮಾನ್ಯ ಮಹಿಳೆ ಮೀಸಲಾತಿ ಬಂದಿದೆ.

ಐದು ವರ್ಷಗಳ ಅವಧಿಯಲ್ಲಿ ಉತ್ತಮ ಆಡಳಿತ ನೀಡಿ, ಅಭಿವೃದ್ಧಿಗೂ ಆದ್ಯತೆ ನೀಡಿದ್ದೇವೆ. ಈ ಹಿನ್ನೆಲೆಯಲ್ಲಿ ಈ ಬಾರಿಯೂ ಜನರ ಒಲವು ಬಿಜೆಪಿ ಪಕ್ಷದತ್ತ ಇದ್ದು, ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನ ಗಳಿಸಿ ಮತ್ತೆ ಅಧಿಕಾರಕ್ಕೇರುತ್ತೇವೆ.

ಅನಿಲ್ ಬಗಂಬಿಲ, ಮಾಜಿ ಉಪಾಧ್ಯಕ್ಷ, ಕೋಟೆಕಾರ್ ಪ.ಪಂ

ಪಟ್ಟಣ ಪಂಚಾಯಿತಿ 17 ವಾರ್ಡ್‌ಗಳಿಗೆ ಚುನಾವಣೆ ನಡೆಯಲಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ದುರಾಡಳಿತ, ಬೆಲೆ ಏರಿಕೆಯಿಂದ ಜನರು ಬೇಸತ್ತಿದ್ದು, ಇದರಿಂದಾಗಿ ಈ ಕಾರಣದಿಂದಾಗಿ ತಳಮಟ್ಟದಿಂದಲೇ ಕಾಂಗ್ರೆಸ್ ಗೆಲ್ಲಬೇಕೆನ್ನುವ ಕನಸಿನಂತೆ ಈ ಬಾರಿ ಕೋಟೆಕಾರ್‌ನಲ್ಲೂ ಕಾಂಗ್ರೆಸ್ ಆಡಳಿತಕ್ಕೆ ಬರಲಿದೆ.

ಜಮಾಲ್ ಅಜ್ಜಿನಡ್ಕ, ಕಾಂಗ್ರೆಸ್ ಮುಖಂಡ