ಜಿಲ್ಲೆ

ಜಿಲ್ಲಾಧಿಕಾರಿ ಆದೇಶಕ್ಕಿಲ್ಲ ಕಿಮ್ಮತ್ತು

Chikkamagaluru

ಕಳಸ: ಆಗಸ್ಟ್​ನಲ್ಲಿ ಸುರಿದ ಮಹಾಮಳೆಗೆ ಶಿಥಿಲಗೊಂಡಿದ್ದ ಕೋಟೆಹೊಳೆ ಸೇತುವೆ ದುರಸ್ತಿ ಹದಿನೈದು ದಿನದೊಳಗೆ ಮಾಡಿ ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿ ಸೂಚನೆಗೆ ಲೋಕೋಪಯೋಗಿ ಇಲಾಖೆಯಲ್ಲಿ ಕಿಮ್ಮತ್ತಿಲ್ಲವಾಗಿದೆ.

27 ವರ್ಷಗಳ ಹಿಂದೆ 34 ಲಕ್ಷ ರೂ. ವೆಚ್ಚದಲ್ಲಿ ಭದ್ರಾ ನದಿಗೆ ಕೋಟೆಹೊಳೆ ಎಂಬಲ್ಲಿ ಸೇತುವೆ ನಿರ್ಮಾಣ ಮಾಡಲಾಗಿತ್ತು. ಇದರಿಂದಾಗಿ ಕಳಕ್ಕೋಡು, ಹೊಸೂರು, ಕಾರ್ಲೆ ಇನ್ನಿತರ ಹಲವಾರು ಹಳ್ಳಿಗಳಿಗೆ ಸಂಚಾರಕ್ಕೆ ಅನುಕೂಲವಾಗಿತ್ತು.

ಕಳೆದ ವರ್ಷದ ಮಳೆಗೆ ಸೇತುವೆ ಮೇಲೆ ನೀರು ಹರಿದು ಸೇತುವೆ ಶಿಥಿಲಾವಸ್ಥೆಗೆ ತುಲುಪಿತ್ತು. ಸೇತುವೆ ಎರಡೂ ಬದಿಯ ತಡೆಗೋಡೆಗಳು ತುಂಡಾಗಿ ನೀರಲ್ಲಿ ಕೊಚ್ಚಿಹೋಗಿದ್ದವು. ಇದರಿಂದ ಹಲವಾರು ದನಕರುಗಳು ನೀರು ಪಾಲಾಗಿದ್ದವು. ಇಂತಹ ಸೇತುವೆಯಲ್ಲಿ ರಾತ್ರಿ ಸಂಚಾರ ಪ್ರಾಣಕ್ಕೇ ಕುತ್ತು ತರಬಹುದು. ಇದೇ ಸೇತುವೆಯಲ್ಲಿ ನಿತ್ಯ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಬರುತ್ತಾರೆ. ವಾಹನಗಳು ತಿರುಗಾಡುತ್ತವೆ.

ಫೆ.10ರಂದು ಉಸ್ತುವಾರಿ ಸಚಿವ ಸಿ.ಟಿ.ರವಿ, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಶಾಸಕ ಎಂ.ಪಿ.ಕುಮಾರಸ್ವಾಮಿ ನೇತೃತ್ವದಲ್ಲಿ ಕಳಸದ ಕಲಶೇಶ್ವರ ಸಭಾ ಭವನದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಊರಿನ ಕೆ.ಸಿ.ಧರಣೇಂದ್ರ ಅವರು ಸೇತುವೆ ಕುರಿತು ಪ್ರಸ್ತಾಪಿಸಿದ್ದರು. ಆ ಸಂದರ್ಭದಲ್ಲಿ ಡಿಸಿ ಹಾಗೂ ಉಸ್ತುವಾರಿ ಸಚಿವರು ಕೂಡಲೇ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಗಮನಕ್ಕೆ ತಂದು ಹದಿನೈದು ದಿನದೊಳಗೆ ಸೇತುವೆ ದುರಸ್ತಿ ಮಾಡಿ ವರದಿ ನೀಡಬೇಕು ಎಂದು ಸೂಚಿಸಿದ್ದರು. ಇದಾಗಿ ಮೂರು ತಿಂಗಳು ಕಳೆದರೂ ದುರಸ್ತಿ ಮಾಡಿಸಿಲ್ಲ. ಪಿಡಬ್ಲ್ಯುಡಿ ಇಂಜಿನಿಯರ್ ಸತೀಶ್ ಅವರನ್ನು ವಿಚಾರಿಸಿದರೆ ಸೇತುವೆ ದುರಸ್ತಿಗೆ 4 ಲಕ್ಷ ರೂ. ಅಂದಾಜು ಪಟ್ಟಿ ತಯಾರಿಸಿದ್ದೇವೆ. ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಿಕೊಡುತ್ತೇವೆ ಎಂದು ಹೇಳುತ್ತಾರೆ.

15 ದಿನದಲ್ಲಿ ಕೆಲಸ ಮಾಡಿ ವರದಿ ನೀಡಬೇಕು ಎಂದು ಡಿಸಿ ಸೂಚಿಸಿದರೂ ಇನ್ನೂ ಅನುಮೋದನೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆಯನ್ನೇ ಸಲ್ಲಿಸಿಲ್ಲ. ಇದರ ಪರಿಣಾಮ ಈ ಬಾರಿ ಮಳೆಗಾಲದಲ್ಲಿ ಗ್ರಾಮಸ್ಥರು ಅಪಾಯದ ಸ್ಥಿತಿಯಲ್ಲೇ ಸೇತುವೆ ಮೇಲೆ ಸಂಚರಿಸಬೇಕಿದೆ. ಜನಸಂಪರ್ಕ ಸಭೆಯಲ್ಲಿ ಡಿಸಿ, ಉಸ್ತುವಾರಿ ಸಚಿವರು ಸೂಚಿಸಿದರೂ ಕಾರ್ಯರೂಪಕ್ಕೆ ಬರಲಿಲ್ಲವಾದರೆ ಜನಸಂಪರ್ಕ ಸಭೆ ಏಕೆ ಬೇಕು ಎಂದು ಗ್ರಾಮಸ್ಥರು ಪ್ರಶ್ನಿಸುತ್ತಾರೆ.

ಫೆಬ್ರವರಿಯಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಕೋಟೆಹೊಳೆ ಸೇತುವೆ ದುರಸ್ತಿಗೊಳಿಸಲು ಡಿಸಿ ಲೋಕೋಪಯೋಗಿ ಇಲಾಖೆಗೆ ಸೂಚಿಸಿದ್ದರು. ಇದಾಗಿ ಮೂರು ತಿಂಗಳು ಕಳೆದರೂ ಪ್ರಯೋಜನವಾಗಿಲ್ಲ. ಏನಾದರೂ ಅನಾಹುತ ಸಂಭವಿಸಿದ ನಂತರ ಪರಿಹಾರ ನೀಡಿ ಸುಮ್ಮನಾಗುವ ಬದಲು ಈಗಲೇ ಎಚ್ಚೆತ್ತುಕೊಳ್ಳಬೇಕು ಎನ್ನುತ್ತಾರೆ ಹೊಸೂರು ನಿವಾಸಿ ಬೋಜೇಗೌಡ.

ಕೋಟೆಹೊಳೆ ಸೇತುವೆ ದುರಸ್ತಿಗೆ 4 ಲಕ್ಷ ರೂ. ಅಂದಾಜು ಪಟ್ಟಿ ತಯಾರಿಸಿದ್ದೇವೆ. ಕೂಡಲೇ ಅದನ್ನು ಅನುಮೋದನೆಗಾಗಿ ಕಳುಹಿಸಿಕೊಡಲಾಗುವುದು ಎಂಬುದು ಪಿಡಬ್ಲ್ಯುಡಿ ಇಂಜಿನೀಯರ್ ಸತೀಶ್ ಅವರ ಅಭಿಪ್ರಾಯ.