ನಾಗಮಂಗಲ: ನಾಗಮಂಗಲದಲ್ಲಿ ಕಳೆದ ವರ್ಷ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಎರಡು ಕೋಮುಗಳ ನಡುವೆ ನಡೆದ ಗಲಭೆಯಿಂದ ಈ ವರ್ಷ ಪೊಲೀಸರ ಅತಿ ಹೆಚ್ಚಿನ ಭದ್ರತೆಯೊಂದಿಗೆ ಇತಿಹಾಸ ಪ್ರಸಿದ್ಧ ಕೋಟೆ ವಿದ್ಯಾಗಣಪತಿ ವಿಸರ್ಜನಾ ಮೆರವಣಿಗೆ ಶಾಂತಿಯುತವಾಗಿ ಸಾವಿರಾರು ಸಂಖ್ಯೆಯ ಹಿಂದು ಕಾರ್ಯಕರ್ತರ ಸಮ್ಮುಖದಲ್ಲಿ ವೈಭವದಿಂದ ಜರುಗಿತು.
ಹಲವು ಜೈಕಾರ ಘೋಷಣೆಗಳೊಂದಿಗೆ ಪುಷ್ಪಾರ್ಚನೆ ಮೂಲಕ, ಹಲವು ಕಲಾತಂಡಗಳ ಕಲಾಪ್ರದರ್ಶನದೊಂದಿಗೆ ವಿಜೃಂಭಣೆಯ ಮೆರವಣಿಗೆಯೊಂದಿಗೆ ಹಂಪೆಅರಸನ ಕೊಳದಲ್ಲಿ ಶುಕ್ರವಾರ ರಾತ್ರಿ ವಿಸರ್ಜನೆ ಮಾಡಲಾಯಿತು.
ಕಳೆದ ಬಾರಿ ಪಟ್ಟಣದ ಭದ್ರಿಕೊಪ್ಪಲಿನ ಗಣೇಶ ವಿಸರ್ಜನ ಮೆರವಣಿಗೆ ಸಾಗುವ ಸಂದರ್ಭದಲ್ಲಿ ನಡೆದ ಎರಡು ಕೋಮುಗಳ ನಡುವಿನ ಗಲಭೆ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು. ಆದರೆ ಈ ಬಾರಿ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಶುಕ್ರವಾರ ನಡೆದ ಪಟ್ಟಣದ ಇತಿಹಾಸ ಪ್ರಸಿದ್ಧ ಕೋಟೆ ವಿದ್ಯಾಗಣಪತಿಮೂರ್ತಿ ವಿಸರ್ಜನಾ ಮೆರವಣಿಗೆ ಸಾವಿರಾರು ಸಂಖ್ಯೆಯ ಆಸ್ತಿಕರು ಸಾಕ್ಷಿಯಾದರು.
ಪಟ್ಟಣದ ಟಿ.ಮರಿಯಪ್ಪ ವೃತ್ತ ಹಾಗೂ ಟಿಬಿ ಬಡಾವಣೆಯಲ್ಲಿ ಹತ್ತಾರು ಜೆಸಿಬಿಗಳ ಮೇಲಿಂದ ಗಣೇಶ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ತಮ್ಮ ಭಕ್ತಿಯನ್ನು ಮೆರೆದರು. ಪಟ್ಟಣದ ವಿವಿಧ ಬೀದಿಗಳಲ್ಲಿ ಮೆರವಣಿಗೆ ಸಾಗುವ ಸಂದರ್ಭದಲ್ಲಿ ಮನೆಗಳ ಮುಂದೆ ನಿಲ್ಲಿಸಿ ಆರತಿ ಮಾಡುವ ಮೂಲಕ ಪೂಜೆ ಸಲ್ಲಿಸಿದರು. ಮಂಡ್ಯ ವೃತ್ತದಲ್ಲಿ ಮಂಡಲ ಪೂಜೆಯನ್ನು ಮಾಡುವ ಮೂಲಕ ಮೆರವಣಿಗೆಯನ್ನು ಬರಮಾಡಿಕೊಂಡರು. ಮೆರವಣಿಗೆಯುದ್ದಕ್ಕೂ ಅಲ್ಲಲ್ಲಿ ಪಾನಕ, ಮಜ್ಜಿಗೆ, ಸೌತೆಕಾಯಿ, ಕುಡಿಯುವ ನೀರನ್ನು ವಿತರಿಸಲಾಯಿತು. ಇಡೀ ನಾಗಮಂಗಲ ಪಟ್ಟಣದಾದ್ಯಂತ ಕೇಸರಿ ಬಣ್ಣದ ಬಟ್ಟಿಂಗ್ಸ್ ಹಾಗೂ ವಿದ್ಯುತ್ ದೀಪಾಲಂಕಾರಗಳೊಂದಿಗೆ ಸಿಂಗರಿಸಲಾಯಿತು.
ಮೆರವಣಿಗೆಗೆ ಗಣ್ಯರಿಂದ ಚಾಲನೆ
ಇತಿಹಾಸ ಪ್ರಸಿದ್ಧ ಕೋಟೆ ಗಣಪತಿ ವಿಸರ್ಜನಾ ಮೆರವಣಿಗೆಗೆ ಶುಕ್ರವಾರ ಬೆಳಗ್ಗೆ ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಅವರು ಗಣಪತಿ ಮೂರ್ತಿಗೆ ಹಾಗೂ ಗೋ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಶ್ರೀಗಳೊಂದಿಗೆ ಮಾಜಿ ಶಾಸಕ ಸುರೇಶ್‌ಗೌಡ, ವಿಧಾನ ಪರಿಷತ್ ಸದಸ್ಯ ದಿನೇಶ್‌ಗೂಳಿಗೌಡ, ಮನ್ಮುಲ್ ನಿರ್ದೇಶಕ ಎನ್.ಅಪ್ಪಾಜಿಗೌಡ, ರಾಜ್ಯ ಒಕ್ಕಲಿಗರ ಸಂಘದ ಖಜಾಂಚಿ ನೆಲ್ಲಿಗೆರೆ ಬಾಲು, ಮುಖಂಡರಾದ ಲಕ್ಷ್ಮೀಕಾಂತ್ ಪೂಜೆಯಲ್ಲಿ ಭಾಗಿಯಾಗಿದ್ದರು. ಶ್ರೀಗಳು ಪೂಜೆ ಸಲ್ಲಿಸಿದ ನಂತರ ಗಣೇಶ ಮೂರ್ತಿಯನ್ನು ದೇವಸ್ಥಾನದಿಂದ ಅಲಂಕೃತಗೊಂಡ ವಾಹನದಲ್ಲಿ ಕೂರಿಸಿ ಪಟ್ಟಣದಲ್ಲಿ ವಿವಿಧ ಕಲಾತಂಡಗಳ ಕಲಾಪ್ರದರ್ಶನದೊಂದಿಗೆ ಬೆಳಗ್ಗೆಯಿಂದ ರಾತ್ರಿವರೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಬಳಿಕ ಗಣಪತಿ ಮೂರ್ತಿ ವಿಸರ್ಜನೆ ಮಾಡಲಾಯಿತು.
ವಿವಿಧ ಕಲಾ ತಂಡಗಳ ಕಲರವ
ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ವಿವಿಧ ಬಗೆಯ ಕಲಾ ತಂಡಗಳು ಪಾಲ್ಗೊಂಡು ವೈವಿಧ್ಯಮಯ ಕಲಾ ಪ್ರದರ್ಶನ ನಡೆಸಿದ್ದು ಇಡೀ ದಿನದ ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು. ತಮಟೆ, ವೀರಗಾಸೆ, ಮಂಗಳವಾದ್ಯ, ಪೂರ್ಣಕುಂಭ, ಪಟದ ಕುಣಿತ, ಪೂಜಾ ಕುಣಿತ, ಡೊಳ್ಳುಕುಣಿತ ಸೇರಿದಂತೆ ಮುಂತಾದ ಕಲಾ ತಂಡಗಳು ಪಾಲ್ಗೊಂಡಿದ್ದವು. ಮೆರವಣಿಗೆಯುದ್ದಕ್ಕೂ ಡಿಜೆ ಅಳವಡಿಸಿದ್ದು ಮೆರವಣಿಗೆಯಲ್ಲಿ ಸಂಭ್ರಮ ಇಮ್ಮಡಿಗೊಳಿಸಿತ್ತು.
ಕುಣಿದು ಕುಪ್ಪಳಿಸಿದ ಯುವಕರು
ಗಣೇಶ ಮೂರ್ತಿ ಮೆರವಣಿಗೆ ಪಟ್ಟಣದ ಬೀದರ್-ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವಾಗ ಶಾಲಾ-ಕಾಲೇಜುಗಳ ನೂರಾರು ಸಂಖ್ಯೆಯ ವಿದ್ಯಾರ್ಥಿನಿಯರು ಹಾಗೂ ಮಹಿಳೆಯರು ಡಿಜೆ ಹಾಗೂ ತಮಟೆ ಸದ್ದಿಗೆ ಭರ್ಜರಿಯಾಗಿ ಸ್ಟೆಪ್ ಹಾಕಿದರು. ಜೈಶ್ರೀರಾಮ್ ಘೋಷಣೆ ಕೂಗಿ, ಕೇಸರಿ ಶಾಲುಗಳನ್ನು ಬೀಸುವ ಮೂಲಕ ಸ್ಟೆಪ್ ಹಾಕುತ್ತಿದ್ದು ಇಡೀ ಮೆರವಣಿಗೆಗೆ ಮೆರುಗು ನೀಡಿತು. ಹಿಂದು ಯುವಕರು ಮೆರವಣಿಗೆಯುದ್ದಕ್ಕೂ ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿ ಹಿಂದು ಪರ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.
ಹಂಪೆಅರಸನ ಕೊಳದಲ್ಲಿ ವಿಸರ್ಜನೆ
ನಾಗಮಂಗಲದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಂತರ ವಿದ್ಯುತ್ ದೀಪಗಳಿಂದ ಅಲಂಕೃತವಾದ ಇತಿಹಾಸ ಪ್ರಸಿದ್ಧ ಹಂಪೆ ಅರಸನ ಕೊಳದಲ್ಲಿ ನಡೆಸಲಾದ ಗಂಗಾರತಿ ಹಾಗೂ ತೆಪ್ಪೋತ್ಸವದ ನಂತರ ಸಾಂಪ್ರಾದಾಯಿಕ ಪೂಜಾ ಕೈಕಂರ್ಯ ನೆರವೇರಿಸಿ ಗಣಪತಿ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು. ನಂತರ ಮಹಾಮಂಗಳಾರತಿಯೊಂದಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ಮಳೆಯಲ್ಲೂ ಸಾಗಿದ ಮೆರವಣಿಗೆ
ಮಂಡ್ಯ ವೃತ್ತದಿಂದ ಮೈಸೂರು ರಸ್ತೆಗೆ ಮೆರವಣಿಗೆ ಸಾಗಿ ಮಸೀದಿ ಸಮೀಪಿಸುತ್ತಿದ್ದಂತೆ ಜೋರು ಮಳೆ ಆರಂಭವಾಯಿತು. ಆದರೆ ಅಷ್ಟು ಜೋರು ಮಳೆಯಾದರೂ ಹಿಂದು ಕಾರ್ಯಕರ್ತರು ಚದುರದೆ ಮಳೆಯಲ್ಲಿಯೇ ಮೆರವಣಿಗೆಯೊಂದಿಗೆ ಸಾಗಿದರು. ಮಳೆಯಲ್ಲಿಯೇ ಡಿಜೆ ಸದ್ದಿಗೆ ಕುಣಿದು ಹಿಂದುಪರ ಜೈಕಾರ ಕೂಗಿದರು. ಮಳೆಗೂ ಜಗ್ಗದೆ ನಾವೆಲ್ಲಾ ಹಿಂದು, ನಾವೆಲ್ಲಾ ಒಂದು ಘೋಷಣೆ ಕೂಗಿ ಕೆಲಕಾಲ ಮೈಸೂರು ರಸ್ತೆಯಲ್ಲೇ ಜಮಾಯಿಸಿದ್ದರು.
ಪೊಲೀಸರ ಹರಸಾಹಸ
ಮೈಸೂರು ರಸ್ತೆಯಲ್ಲಿ ಮೆರವಣಿಗೆ ಸಾಗುವ ಸಂದರ್ಭದಲ್ಲಿ ಚಾಮರಾಜನಗರ- ಜೇವರ್ಗಿ ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ನೆರೆದಿದ್ದರಿಂದ ಟ್ರಾಫಿಕ್ ಸಮಸ್ಯೆ ಉಂಟಾಯಿತು. ಟ್ರಾಫಿಕ್ ಸಮಸ್ಯೆ ನಿವಾರಿಸುವುದು ಒಂದೆಡೆಯಾದರೆ ಮಸೀದಿ ಮುಂಭಾಗದಿಂದ ಮೆರವಣಿಗೆಯನ್ನು ಮುಂದಕ್ಕೆ ಸಾಗಿಸುವುದು ಮತ್ತೊಂದು ಸವಾಲಾಯಿತು. ಇಷ್ಟೆಲ್ಲದರ ಜತೆಗೆ ಜೋರು ಮಳೆ ಬಂದರೂ ಪೊಲೀಸರು ಮಳೆಯಲ್ಲಿಯೇ ನಿಂತು ಮೆರವಣಿಗೆಯನ್ನು ಮಸೀದಿಯಿಂದ ಮುಂದಿನ ರಸ್ತೆಗೆ ಸಾಗಿಸುವ ಜತೆಗೆ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸಲು ಹರಸಾಹಸಪಟ್ಟರು.
ಮೆರವಣಿಗೆ ಮೇಲೆ ಪೊಲೀಸ್ ಹದ್ದಿನಕಣ್ಣು
ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ 5 ಕೆಎಸ್‌ಆರ್‌ಪಿ ತುಕಡಿ, 10 ಜಿಲ್ಲಾ ಶಸಸ್ತ್ರ ಮೀಸಲು ಪಡೆ, 2 ಎಎಸ್ಪಿ, 6 ಡಿವೈಎಸ್ಪಿ, 25 ಸಿಪಿಐ, ಪಿಎಸ್ಸೈಗಳು ಸೇರಿದಂತೆ 550 ಜನ ಕಾನ್‌ಸ್ಟೆಬಲ್, ಬೈಕ್ ಪ್ಯಾಟ್ರೋಲ್, 2 ಡ್ರೋನ್ ಕ್ಯಾಮರಾ, ವಿವಿಧ ಸ್ಥಳಗಳಲ್ಲಿ ಸಿಸಿ ಟಿವಿಗಳನ್ನು ಅಳವಡಿಸುವ ಮೂಲಕ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ಮೆರವಣಿಗೆ ಮೇಲೆ ಹದ್ದಿನ ಕಣ್ಣಿಡಲಾಯಿತು. ಮೆರವಣಿಗೆ ಆರಂಭವಾದ ನಂತರ ಪಟ್ಟಣಕ್ಕೆ ಆಗಮಿಸಿದ ಮೈಸೂರು ವಲಯ ಐಜಿಪಿ ಡಾ.ಬೋರಲಿಂಗಯ್ಯ ಅವರು ಮೆರವಣಿಗೆ ಮೈಸೂರು ರಸ್ತೆಯಿಂದ ಮುಂದಕ್ಕೆ ಸಾಗುವವರೆಗೆ ಪಟ್ಟಣದಲ್ಲಿಯೇ ಬೀಡುಬಿಟ್ಟಿದ್ದರು.
ಸ್ವಯಂಪ್ರೇರಿತ ಬಂದ್
ಗಣೇಶ ವಿಸರ್ಜನೆ ಮೆರವಣಿಗೆಗೆ ಸಾಥ್ ನೀಡುವ ಸಲುವಾಗಿ ನಾಗಮಂಗಲದಲ್ಲಿ ಅಂಗಡಿ ಮುಂಗಟ್ಟುಗಳು ಶುಕ್ರವಾರ ಬೆಳಗ್ಗೆಯಿಂದಲೇ ಸ್ವಯಂಪ್ರೇರಿತವಾಗಿ ಬಾಗಿಲು ಹಾಕಿ ಸಹಕರಿಸಿದರು. ಜಿಲ್ಲಾಧಿಕಾರಿ ಡಾ.ಕುಮಾರ ಆದೇಶದಂತೆ ಪಟ್ಟಣದಿಂದ 10 ಕಿ.ಮೀ. ವ್ಯಾಪ್ತಿಯ ಎಲ್ಲ ವಿಧದ ಮದ್ಯದಂಗಡಿಗಳ ವಹಿವಾಟಿಗೆ ನಿಷೇಧಿಸಲಾಗಿತ್ತು.
ಅತ್ಯಾಕರ್ಷಕ ಮಹಾದ್ವಾರ
73ನೇ ಗಣೇಶೋತ್ಸವದ ಹಿನ್ನೆಲೆಯಲ್ಲಿ ಪಟ್ಟಣದ ಹೃದಯ ಭಾಗ ಟಿ.ಮರಿಯಪ್ಪ ವೃತ್ತದಲ್ಲಿ ಭುಜದ ಮೇಲೆ ಶ್ರೀರಾಮನನ್ನು ಹೊತ್ತಿರುವ ಬೃಹತ್ ಗಾತ್ರದ ವೀರಾಂಜನೇಯ ಮೂರ್ತಿ ಹೊಂದಿರುವ ಕೇಸರಿ ಬಣ್ಣದ ಮಹಾದ್ವಾರ ಎಲ್ಲರನ್ನೂ ಆಕರ್ಷಿಸಿತು. ಮಹಾದ್ವಾರದ ಮೂಲಕ ಗಣೇಶ ಮೂರ್ತಿ ಮೆರವಣಿಗೆ ಸಾಗುವ ಸಂದರ್ಭ ಮೊಬೈಲ್‌ಗಳಲ್ಲಿ ವಿಡಿಯೋ ಹಾಗೂ ಫೋಟೋ ಕ್ಲಿಕ್ಕಿಸಿಕೊಳ್ಳಲು ಸಾವಿರಾರು ಸಂಖ್ಯೆಯ ಜನರು ಜಮಾಯಿಸಿದ್ದರು.