ಜಿಲ್ಲೆ

ಇಎಸ್​ಐ ಆರೋಗ್ಯ ವಿಮೆ ವೇತನ ಮಿತಿ ಹೆಚ್ಚಿಸಿ...

ಕೇಂದ್ರ ಕಾರ್ಮಿಕ ಸಚಿವಗೆ ಸಂಸದ ಪೂಜಾರಿ ಮನವಿ

30 ಸಾವಿರ ರೂ.ಗೆ ಮಿತಿ ಏರಿಸಲು ಒತ್ತಾಯ

ವಿಜಯವಾಣಿ ಸುದ್ದಿಜಾಲ ಉಡುಪಿ

ಕೇಂದ್ರ ಪ್ರಾಯೋಜಿತ ಇಎಸ್​ಐ ಆರೋಗ್ಯ ವಿಮೆಯು 21 ಸಾವಿರ ರೂ. ಒಳಗೆ ವೇತನ ಪಡೆಯುವ ಸಿಬ್ಬಂದಿಗೆ ಮಾತ್ರ ಸೀಮಿತವಾಗಿದ್ದು ಅದನ್ನು 30 ಸಾವಿರ ರೂ.ವರೆಗೆ ವೇತನದ ವರೆಗೆ ಮಿತಿ ಹೆಚ್ಚಿಸಬೇಕು ಎಂದು ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಕಾರ್ಮಿಕ ಸಚಿವ ಡಾ. ಮನ್ಸುಕ್​ ಮಾಂಡವೀಯ ಅವರಿಗೆ ಲಿಖಿತ ಮನವಿ ಸಲ್ಲಿಸಿದರು.

ದೆಹಲಿಯಲ್ಲಿ ಸಚಿವರನ್ನು ಮೇ 28ರಂದು ಭೇಟಿ ಮಾಡಿ ಈ ವಿಚಾರವನ್ನು ಚರ್ಚಿಸಿ, ಇತ್ತೀಚೆಗಿನ ವರ್ಷದಲ್ಲಿ ಸರ್ಕಾರಿ ಮತ್ತು ಖಾಸಗಿ ಕಂಪನಿಗಳಲ್ಲಿ ವೇತನ ಪರಿಷ್ಕರಣೆ ಮಾಡಿದ್ದಾರೆ. ಅದರಿಂದ ಬಹುತೇಕ ಕಾರ್ಮಿಕರು ಹೆಚ್ಚು ವೇತನ ಪಡೆಯುತ್ತಿದ್ದದಾರೆ. ಹೀಗಾಗಿ ಇಎಸ್​ಐ ವಿಮೆಯ ವೇತನದ ಮಿತಿಯನ್ನು 21 ಸಾವಿರದಿಂದ 30 ಸಾವಿರ ರೂ.ಗೆ ಏರಿಕೆ ಮಾಡಬೇಕು ಎಂದು ವಿನಂತಿಸಿದರು.

ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಪ್ರಸ್ತಾಪಿತ ಇಎಸ್​ಐ ಆಸ್ಪತ್ರೆಯನ್ನೂ ಸಹ ಶೀಘ್ರ ಪ್ರಾರಂಭಿಸಲು ಮುತುವರ್ಜಿ ವಹಿಸಬೇಕು ಎಂದು ಸಚಿವರಲ್ಲಿ ಕೋರಿಕೆ ಸಲ್ಲಿಸಿದರು. ಮನವಿ ಪರಿಶೀಲಿಸಿದ ಸಚಿವ ಡಾ. ಮನ್ಸುಕ್​, ಇಎಸ್​ಐ ಮೊತ್ತ ಪರಿಷ್ಕರಣೆ ಹಾಗೂ ಬ್ರಹ್ಮಾವರದಲ್ಲಿ ಆಸ್ಪತ್ರೆ ಬಗ್ಗೆ ಸದ್ಯದಲ್ಲೇ ಆದೇಶ ಹೊರಡಿಸುವುದಾಗಿ ಭರವಸೆ ನೀಡಿದರು.