ಜಿಲ್ಲೆ

ಸಂವಿಧಾನ ಹೆಸರಿನಲ್ಲಿ ಕಾಂಗ್ರೆಸ್ ರಾಜಕೀಯ - ಕೋಟ ಶ್ರೀನಿವಾಸ ಪೂಜಾರಿ ಆರೋಪ


ಮಂಗಳೂರು : ರಾಜ್ಯದ ಕಾಂಗ್ರೆಸ್ ಸರ್ಕಾರ ಸಂವಿಧಾನ ಕಾರ್ಯಕ್ರಮ ಹೆಸರಿನಲ್ಲಿ ರಾಜಕೀಯ ಸಮಾವೇಶ ಮಾಡಲು ಹೊರಟಿದೆ. ರಾಜಕೀಯ ದ್ವೇಷಕ್ಕೆ ಸಂವಿಧಾನ ಹಾಗೂ ಅಂಬೇಡ್ಕರ್ ಹೆಸರು ಬಳಕೆ ಸಲ್ಲದು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಮಂಗಳವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ಸಂವಿಧಾನ ಕಾರ್ಯಕ್ರಮದ ಮೂಲಕ ಕೇಂದ್ರ ಸರ್ಕಾರ, ಪ್ರಧಾನಿ ಮೋದಿ ಅವರನ್ನು ನಿಂದಿಸುವ ಕಾರ್ಯ ನಡೆಯುತ್ತಿದೆ. ಇಂತಹ ಕೆಲಸಕ್ಕೆ ಜನರ ತೆರಿಗೆ ಹಣ ಪೋಲು ಮಾಡುವುದು ಸರಿಯಲ್ಲ ಎಂದರು.
ಸಂವಿಧಾನ ಉಳಿಸಲು ರಾಜ್ಯ ಸರ್ಕಾರ ಸಮಾವೇಶ ಮಾಡುವುದು ತಪ್ಪಲ್ಲ. ಆದರೆ ಸಂವಿಧಾನ ಕಾರ್ಯಕ್ರಮವನ್ನು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವನ್ನಾಗಿ ಮಾಡಿಕೊಂಡು ರಾಜಕೀಯ ಮಾಡುವುದನ್ನು ಕೈಬಿಡಬೇಕು .ರಾಜಕಾರಣಕ್ಕಾಗಿಯೇ ಅಂಬೇಡ್ಕರ್ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ. ಸಂವಿಧಾನ ರಚನೆ ಸಮಯದಲ್ಲಿ ಕಾಂಗ್ರೆಸ್ ಮಾಡಿದ ಕೃತ್ಯಗಳು ಜನರಿಗೆ ಗೊತ್ತಿದೆ. ಈಗ ದೇಶವನ್ನು ಜೋಡಿಸುವ ಕೆಲಸ ಪ್ರಧಾನಿ ಮೋದಿ ಮಾಡಿದ್ದಾರೆ. ರಾಹುಲ್ ಗಾಂಧಿ ಕೇವಲ ರಾಜಕೀಯಕ್ಕಾಗಿ ಯಾತ್ರೆ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಲೋಕಸಭೆ ಚುನಾವಣೆಗೆ ದ.ಕ.ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಕಾರ್ಯಕರ್ತರು ಅಪೇಕ್ಷೆ ಪಡುವುದು ತಪ್ಪಲ್ಲ. ಅದನ್ನು ಪಕ್ಷದ ಅಶಿಸ್ತು ಹೇಳುವುದು ಸರಿಯಲ್ಲ. ಅಂತಿಮವಾಗಿ ಪಕ್ಷದ ವರಿಷ್ಠರು ಟಿಕೆಟ್ ನೀಡಿದ ಮೇಲೆ ಎಲ್ಲರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು .ದ.ಕ.ಕ್ಷೇತ್ರದಲ್ಲಿ ಬಿಜೆಪಿ ಈ ಬಾರಿ ಹೆಚ್ಚು ಮತಗಳ ಅಂತರದಿಂದ ಗೆಲವು ಸಾಧಿಸಲಿದೆ.ಕಾರ್ಯಕರ್ತರು ನಿರಂತರ ಕೆಲಸ ಮಾಡುತ್ತಿದ್ದಾರೆ. ಜತೆಗೆ ಕೇಂದ್ರದ ಸಾಧನೆ, ಮೋದಿ ಅವರ ಕಾರ್ಯಶೈಲಿ ಮತಗಳ ಅಂತರವನ್ನು ಹೆಚ್ಚಿಸಲು ನೆರವಾಗಲಿದೆ ಎಂದು ಕೋಟ ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಲೋಕಸಭಾ ಕ್ಷೇತ್ರದ ಸಂಚಾಲಕ ನಿತಿನ್ ಕುಮಾರ್ ಉಪಸ್ಥಿತರಿದ್ದರು.