ಕೋಟ ಶ್ರೀನಿವಾಸ್​ ಪೂಜಾರಿ 
ಜಿಲ್ಲೆ

ಸಿಬಿಐ ತನಿಖೆಯಿಂದ ತಪ್ಪಿಸಿಕೊಳ್ಳಲು ಯತ್ನ

ಪ್ರಶಾಂತ ಜಿ. ಭಾಗ್ವತ

ಸರ್ಕಾರದ ವರ್ತನೆಗೆ ಕೋಟ ಆಕ್ರೋಶ | ರಾಜ್ಯ ದಾಟಿದೆ ನಿಗಮದ ಹಗರಣ

ಉಡುಪಿ: ವಾಲ್ಮೀಕಿ ನಿಗಮದಲ್ಲಿ ಕೋಟ್ಯಂತರ ರೂ. ಹಗರಣ ವಿಚಾರಕ್ಕೆ ಸಂಬಂಧಿಸಿ ಇನ್ನೂ ರಾಜೀನಾಮೆ ನೀಡದ ಸಚಿವ ನಾಗೇಂದ್ರ ವಿರುದ್ಧ ವಿಪ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ್​ ಪೂಜಾರಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಉಡುಪಿಯಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿ, ನಿಗಮದಲ್ಲಿ 187 ಕೋಟಿ ರೂ. ಹಗರಣ ಆಗಿದ್ದರಿಂದ ಸಿಬಿಐ ತನಿಖೆಗೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾವು ಒತ್ತಾಯ ಮಾಡಿದ್ದೆವು. ಆದರೆ, ಸರ್ಕಾರ ಎಸ್​ಐಟಿ ನೇಮಕ ಮಾಡಿದ್ದು, ಸಿಬಿಐ ತನಿಖೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ದಾಟಿದ ಹಗರಣ

ಯೂನಿಯನ್​ ಬ್ಯಾಂಕ್​ ಸಹ ಸಿಬಿಐಗೆ ಪತ್ರ ಬರೆದು ತನಿಖೆ ಮಾಡುವಂತೆ ಹೇಳಿದೆ. ವಾಲ್ಮೀಕಿ ನಿಗಮದ 87 ಕೋಟಿ ರೂಪಾಯಿ ಹಣ ಹೈದರಾಬಾದ್​ ಮೂಲದ 9 ಕಂಪನಿಗಳಿಗೆ ಹೋಗಿದ್ದು, ರಾಜ್ಯವನ್ನು ದಾಟಿ ನಡೆದ ಹಗರಣ ಇದಾಗಿದೆ. ಹೀಗಾಗಿ ಸಿಬಿಐ ತನಿಖೆಗೆ ಈಗಲೂ ಒತ್ತಾಯ ಮಾಡುತ್ತೇವೆ ಎಂದರು.

ಸಚಿವ ನಾಗೇಂದ್ರ ಬೆದರಿಕೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ನಾಗೇಂದ್ರ ಅವರನ್ನು ಕರೆದು ರಾಜೀನಾಮೆ ಕೊಡಲು ಹೇಳಿದ್ದಾರಂತೆ. ಆದರೆ, ತನ್ನ ರಾಜೀನಾಮೆ ಕೇಳಿದರೆ ಎಲ್ಲರ ವಿಚಾರ ಬಹಿರಂಗ ಮಾಡುತ್ತೇನೆ ಎಂದು ನಾಗೇಂದ್ರ ಬೆದರಿಕೆ ಹಾಕಿದ್ದಾರಂತೆ. ಹೀಗಾಗಿ ಪರಿಶಿಷ್ಟ ಜಾತಿ ಪಂಗಡದವರ ಕೆಲಸ ಮಾಡುತ್ತೇನೆ ಎಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂದಿಗ್ಧತೆಯಲ್ಲಿ ಇದ್ದಾರೆ. ಓರ್ವ ಸಚಿವನ ರಾಜೀನಾಮೆ ಪಡೆಯಲು ಆಗದಷ್ಟು ಅವರು ಈಗ ದುರ್ಬಲರಾಗಿದ್ದಾರೆ ಎಂದು ಟೀಕಿಸಿದ ಕೋಟ, ವಾರದೊಳಗೆ ಸಚಿವ ನಾಗೇಂದ್ರ ರಾಜೀನಾಮೆ ನೀಡದಿದ್ದಲ್ಲಿ ಸಿಎಂ ರಾಜೀನಾಮೆ ನೀಡುವಂತೆ ಆಗ್ರಹಿಸಬೇಕಾಗುತ್ತದೆ ಎಂದರು.

ಧ್ಯಾನಕ್ಕೂ ಕಾಂಗ್ರೆಸ್​ ಟೀಕೆ

ಪ್ರಧಾನಿ ನರೇಂದ್ರ ಮೋದಿ ಅವರ ಧ್ಯಾನದ ಕುರಿತು ಕಾಂಗ್ರೆಸ್​ ನಾಯಕರ ಆಕ್ಷೇಪದ ವಿಚಾರಕ್ಕೆ ಪ್ರತಿಕ್ರಿಯಿಸಿ, ವಿದೇಶ ಪ್ರಯಾಣ ಹಾಗೂ ಐಷಾರಾಮಿ ಜೀವನವಷ್ಟೇ ಕಾಂಗ್ರೆಸ್ಸಿಗರಿಗೆ ತಿಳಿದಿದೆ. ಭಾರತೀಯ ಸಂಸ್ಕೃತಿ, ಧ್ಯಾನ ಅವರ ಮನಸ್ಸಿಗೆ ಒಪ್ಪಿಗೆ ಆಗುವುದೇ ಇಲ್ಲ. ದೇಶಕ್ಕೋಸ್ಕರ ದುಡಿಯುವ ಪ್ರಧಾನಿ ಕುರಿತು ಟೀಕಿಸಲು ಅವರಿಗೆ ಏನೂ ವಿಷಯ ಇಲ್ಲ. ಹೀಗಾಗಿ ಅಸಹಾಯಕರಾಗಿರುವ ಅವರು, ಮೋದಿ ಧ್ಯಾನವನ್ನೂ ಟೀಕೆ ಮಾಡುತ್ತಿದ್ದಾರೆ. ಭಾರತೀಯ ಸಂಸ್ಕೃತಿ ಒಪ್ಪದ ಕೆಟ್ಟ ಪರಂಪರೆ ಅವರದ್ದು ಎಂದರು.

ಮಾಟ-ಮಂತ್ರ ಸಂಸ್ಕೃತಿ ನಮ್ಮದಲ್ಲ

ಕೇರಳದಲ್ಲಿ ಬಿಜೆಪಿಯವರು ಶತ್ರು ಭೈರವಿಯಾಗ ಮಾಡಿದ್ದಾರೆ ಎಂಬ ಡಿ.ಕೆ. ಶಿವಕುಮಾರ್​ ಆರೋಪಕ್ಕೆ ಉತ್ತರಿಸಿ, ದ್ವಾರಕನಾಥ್​ ಎಂಬ ಗುರುಗಳಿದ್ದಾರೆ. ಅವರ ಬಳಿ ಈ ವಿಚಾರ ಕೇಳಿದರೆ ಒಳ್ಳೆಯದು. ಮಾಟ-ಮಂತ್ರ ಮಾಡುವ ಸಂಸ್ಕೃತಿ ನಮ್ಮದಲ್ಲ. ಅದರ ಮೂಲಕ ಅಧಿಕಾರಕ್ಕೆ ಬರುತ್ತೇವೆ ಎನ್ನುವ ಭ್ರಮೆಯೂ ನಮಗಿಲ್ಲ. ಅವರ ಗುರುಗಳ ಬಳಿ ಕೇಳಿದರೆ ಸರಿಯಾದ ಉತ್ತರ ಸಿಗಬಹುದು ಎಂದು ಕೋಟ ಶ್ರೀನಿವಾಸ್​ ಪೂಜಾರಿ ವ್ಯಂಗ್ಯವಾಡಿದರು.