ಜಿಲ್ಲೆ

ಆಡಳಿತದಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲ -ಕೋಟ ಶ್ರೀನಿವಾಸ ಪೂಜಾರಿ

Mangaluru - Hariprasad Rai


ಮಂಗಳೂರು : ರಾಜ್ಯದ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿದೆ. ಬರ ನಿರ್ವಹಣೆ ಮಾಡಲು ಸಾಧ್ಯವಾಗದೆ
ಅಸಹಾಯಕ ಸ್ಥಿತಿಯಲ್ಲಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ವಿಧಾನ ಪರಿಷತ್‌ನ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಮಂಗಳೂರಿನ ಜಿಲ್ಲಾ ಬಿಜೆಪಿ ಚುನಾವಣಾ ಕಚೇರಿಗೆ ಶುಕ್ರವಾರ ಭೇಟಿ ನೀಡಿದ ಸಂದರ್ಭ ಸುದ್ದಿಗಾರರ ಜತೆ ಮಾತನಾಡಿದ ಅವರು ಸರ್ಕಾರ ಜನತ ಸಮಸ್ಯೆಗಳನ್ನು ಬಗೆಹರಿಸುವ ಬದಲು ಆರ್‌ಎಸ್‌ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್, ಮೈಸೂರು ಸಂಸದ ಪ್ರತಾಪ್ ಸಿಂಹ
ಅವರನ್ನು ಬಂಧಿಸುವ ವಿಚಾರದಲ್ಲಿ ಮುಳುಗಿದೆ ಎಂದರು.
ಬರದ ವಿಚಾರದಲ್ಲಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರವನ್ನು ದೂರುವುದು ಸರಿಯಲ್ಲ. ರಾಜ್ಯ ಸರ್ಕಾರವೇ 10 ಸಾವಿರ ಕೋಟಿ ರೂ. ಘೋಷಿಸಲಿ. ಆಡಳಿತ ಪಕ್ಷ ಹಾಗೂ ಪ್ರತಿಪಕ್ಷ ಜತೆಯಾಗಿ ಕೇಂದ್ರ ಸರ್ಕಾರದ ಜತೆ ಮಾತನಾಡೋಣ. ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಬೇಡಿ ಎಂದು ಅವರು ಹೇಳಿದರು.
ಯುವನಿಧಿ ಯೋಜನೆಯಲ್ಲಿ ಪದವಿ ಪಡೆದ ಎಲ್ಲ ನಿರುದ್ಯೋಗಿಗಳಿಗೆ ಹಣ ಕೊಡುತ್ತೇವೆ ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿತ್ತು.
ಈಗ 2022-23ರಲ್ಲಿ ಪದವಿ ಪೂರೈಸಿದ ನಿರುದ್ಯೋಗಿಗಳಿಗೆ ಮಾತ್ರ ಸೌಲಭ್ಯ ಎನ್ನುತ್ತಿದೆ. ಹಾಗಾಗಿ ಕಾಂಗ್ರೆಸ್ ನೀಡಿದ ಗ್ಯಾರಂಟಿ ಭರವಸೆ ಸುಳ್ಳಾಗಿದೆ ಎಂದು ಅವರು ಹೇಳಿದರು.
ಶಾಸಕ ಬಸನಗೌಡ ಪಾಟೀಳ್ ಯತ್ನಾಳರ ಹೇಳಿಕೆ ಪ್ರಕರಣ ಬಿಜೆಪಿ ವರಿಷ್ಠರ ಮುಂದಿದೆ. ಅವರು ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾಯುತ್ತಿದ್ದೇವೆ. ಬಹಳದಿನಗಳಿಂದ ಇಂಥದ್ದೆಲ್ಲ ನಡೆಯುತ್ತಿದೆ. ಸದ್ಯದಲ್ಲೇ ಅದೆಲ್ಲಾ ಅಂತ್ಯ ಕಾಣುತ್ತದೆ ಎಂದು ಕೋಟ ಹೇಳಿದರು.