ಜಿಲ್ಲೆ

ಅಭಿವೃದ್ಧಿಗೊಳ್ಳದ ಕೋಟ ಶ್ರೀಕೃಷ್ಣ ರಸ್ತೆ

Udupi

ಕೋಟ: ಇಲ್ಲಿನ ಕೋಟ ಗ್ರಾಮಪಂಚಾಯಿತಿ ವ್ಯಾಪ್ತಿಯ ರಸ್ತೆಯೊಂದು 20 ವರ್ಷ ಹಿಂದೆ ಮುಖ್ಯಮಂತ್ರಿ ಬರುವ ನೆಪದಲ್ಲಿ ರಾತ್ರಿ ಬೆಳಗಾಗುವುದರೊಳಗೆ ಅಭಿವೃದ್ಧಿ ಕಂಡಿತ್ತು. ಆದರೆ ಅದೇ ಕೊನೆ, ಮತ್ತೆ ಈ ರಸ್ತೆಯ ಅಭಿವೃದ್ಧಿಗೆ ಕಾಲ ಕೂಡಿ ಬಂದಿಲ್ಲ.

20 ವರ್ಷ ಹಿಂದೆ ಮುಖ್ಯಮಂತ್ರಿಯಾಗಿದ್ದ ಎಸ್. ಎಂ. ಕೃಷ್ಣ ಇಲ್ಲಿನ ಜ್ಯೋತಿಷಿಯೊಬ್ಬರ ಮನೆಗೆ ಈ ರಸ್ತೆಯ ಮೂಲಕ ತೆರಳಬೇಕಿದ್ದ ಸಂದರ್ಭದಲ್ಲಿ ರಾತ್ರಿ ಬೆಳಗಾಗುವುದರೊಳಗೆ ಡಾಂಬರು ಅಳವಡಿಸಿ ಅಭಿವೃದ್ಧಿಪಡಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ಶ್ರೀಕೃಷ್ಣ ರಸ್ತೆ ಎಂದು ಹೆಸರು ಪಡೆದಿದೆ.

ಆ ಬಳಿಕ ಈ ರಸ್ತೆ ಅಭಿವೃದ್ಧಿ ಕಾಣದೆ ಹಾಗೇ ಉಳಿದುಕೊಂಡಿದೆ. ಹೊಂಡ - ಗುಂಡಿಗಳಿಂದ ಸಂಚಾರಕ್ಕೆ ತೊಂದರೆಯಾಗಿದೆ.

ಕೋಟ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಈ ರಸ್ತೆ ಹರ್ತಟ್ಟು ಭಾಗದ ಕಲ್ಲಟ್ಟು ಮಹಾಲಿಂಗೇಶ್ವರ ದೇವಳ ಅಂದರೆ ಸುಮಾರು 3 ಕಿ.ಮೀ. ರಸ್ತೆ ಸಂಪರ್ಕಿಸುತ್ತದೆ. ಕಿರಿದಾದ ಈ ರಸ್ತೆ ಮೂಡುಗಿಳಿಯಾರು ಸಂಪರ್ಕಿಸಲು ಸುಲಭ ಮಾರ್ಗವಾಗಿದೆ.

ರಸ್ತೆ ಅಭಿವೃದ್ಧಿ ಕುರಿತಂತೆ ಸ್ಥಳೀಯ ಪಂಚಾಯಿತಿ ಸದಸ್ಯರು ಹಾಗೂ ಅಧ್ಯಕ್ಷರು ಹೆಚ್ಚಿನ ಮುತುವರ್ಜಿ ವಹಿಸಿ ಕಾಂಕ್ರೀಟ್ ಕಾಮಗಾರಿ ಪೂರ್ಣಗೊಳಿಸಲು ಜನ ಆಗ್ರಹಿಸಿದ್ದಾರೆ. ಇದೇ ರೀತಿ ಅಭಿವೃದ್ಧಿಗೊಳಿಸದಿದ್ದರೆ ಹೋರಾಟದ ಎಚ್ಚರಿಕೆ ಸ್ಥಳೀಯರು ನೀಡಿದ್ದಾರೆ.

ಗುದ್ದಲಿಪೂಜೆ ಮಾತ್ರ

ಈ ರಸ್ತೆ ಕಾಂಕ್ರೀಟ್ ಕಾಮಗಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮೂಲಕ 20 ಲಕ್ಷ ರೂ. ಮೀಸಲಿಸಿ ಕಳೆದ ವರ್ಷ ಗುದ್ದಲಿಪೂಜೆ ಸಹ ಸಚಿವರು ನೆರವೇರಿಸಿದರು. ಆದರೆ ವರ್ಷ ಕಳೆದರೂ ಕಾಮಗಾರಿ ನಡೆದೇ ಇಲ್ಲ. ಈ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಕಾಯ್ದಿರಿಸಿದ ಹಣ ಎಲ್ಲಿಗೆ ಹೋಗಿದೆ ಎಂದು ಪ್ರಶ್ನಿಸುತ್ತಿದ್ದಾರೆ.

ಶ್ರೀ ಕೃಷ್ಣ ರಸ್ತೆ ಅಭಿವೃದ್ಧಿ ಕುರಿತಂತೆ ಕಾರ್ಯೋನ್ಮುಖವಾಗಿದ್ದು ಕರೊನಾ ಸಂಕಷ್ಟದಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆ ಕಂಡಿದೆ. ಸುಮಾರು 240 ಮೀ. ರಸ್ತೆಗೆ ಕಾಂಕ್ರೀಟ್ ಅಳವಡಿಸಲು ವಿಧಾನಪರಿಷತ್ ಸದಸ್ಯ ಫಾರೂಕ್ ಅವರು 5 ಲಕ್ಷ ರೂ. ಹಾಗೂ ರಾಜ್ಯಸಭೆ ಸದಸ್ಯೆ ನಿರ್ಮಲಾ ಸೀತಾರಾಮನ್ ಅವರ 5 ಲಕ್ಷ ರೂ. ನಿಧಿಯಲ್ಲಿ ಕಾಮಗಾರಿ ಶೀಘ್ರದಲ್ಲೇ ಪ್ರಾರಂಭಗೊಳ್ಳಲಿದೆ. ಇನ್ನುಳಿದ ಭಾಗಗಳ ರಸ್ತೆ ಅಭಿವೃದ್ಧಿಗೆ ಸ್ಥಳೀಯ ಶಾಸಕ ಹಾಗೂ ಸಚಿವರ ಬಳಿ ಮನವಿ ಇರಿಸಲಾಗಿದೆ.

ಅಜಿತ್ ದೇವಾಡಿಗ, ಕೋಟ ಗ್ರಾಪಂ ಅಧ್ಯಕ್ಷ

ಕೋಟದ ಶ್ರೀಕೃಷ್ಣ ರಸ್ತೆಯು ದಿನಕ್ಕೆ ನೂರಾರು ವಾಹನಗಳು ತಿರುಗುವ ಮುಖ್ಯ ಮಾರ್ಗವಾಗಿದ್ದು, ಈಗ ಹೊಂಡ ಗುಂಡಿಗಳಿಂದಾಗಿ ಸಂಚಾರಕ್ಕೆ ಅಯೋಗ್ಯವಾಗಿದೆ. ಸಂಬಂಧಿಸಿದವರು ಇನ್ನಾದರೂ ಸಂಚಾರಯೋಗ್ಯ ರಸ್ತೆ ನಿರ್ಮಿಸಲಿ.

ಗೋಪಾಲ ಭಟ್ ಕೋಟ, ಸ್ಥಳೀಯ ನಿವಾಸಿ