ಕೋಟ: ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ಮತ್ತೊಮ್ಮೆ ನೆನಪಿಸುವ ಹಾಗೂ ಪ್ರಜಾಪ್ರಭುತ್ವ ಬಲಪಡಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.
ಕೋಟ ಹಾಗೂ ಕುಂದಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸ್ವಾತಂತ್ರೃದ ಅಮೃತಮಹೋತ್ಸವ ಅಂಗವಾಗಿ ಸಾಲಿಗ್ರಾಮದಿಂದ ಕೋಟ ಮಾರ್ಗವಾಗಿ ತೆಕ್ಕಟ್ಟೆವರೆಗೆ ಹಮ್ಮಿಕೊಂಡ ಕಾಲ್ನಡಿಗೆ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹರ್ ಘರ್ ತಿರಂಗಾ ಘೋಷಿಸಲು ಬಿಜೆಪಿಗೆ ನೈತಿಕತೆ ಇಲ್ಲ. ಜನಸಾಮಾನ್ಯರ ಸ್ವಾತಂತ್ರ್ಯವನ್ನೇ ಕಸಿದು ಆಡಳಿತ ನಡೆಸುವ ಪಕ್ಷ, ಸ್ವಾತಂತ್ರೃದ ಬಗ್ಗೆ ಉಲ್ಲೇಖಿಸುವುದು ವಿಪರ್ಯಾಸ. ಕಾಂಗ್ರೆಸ್ ಸ್ವಾತಂತ್ರ್ಯಕ್ಕೆ ಬಹುದೊಡ್ಡ ಕೊಡುಗೆ ನೀಡಿದೆ. ಕಳೆದ 60 ವರ್ಷಗಳಿಂದ ಸಂವಿಧಾನ ಬದ್ಧ ಆಡಳಿತ ನಡೆಸಿ ಬಡವರ ಕಾಳಜಿ ಕಾರ್ಯಕ್ರಮ ನೀಡಿದೆ.ಬಿಜೆಪಿ ಗಾಂಧಿ ಹತ್ಯೆಗೈದ ಗೋಡ್ಸೆಗೆ ದೇವಾಲಯ ಕಟ್ಟಲು ಶ್ರಮಿಸುತ್ತದೆ. ನೆಹರು, ಇಂದಿರಾ, ರಾಜೀವ್ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ.ಕರಾವಳಿಯಲ್ಲಿ ಶಾಂತಿ ಕದಡುವ ಕೆಲಸ ಮಾಡಿ ಒಂದು ಸಮುದಾಯವನ್ನು ಒಲೈಸುವ ಕೆಲಸ ಮಾಡುತ್ತಿದೆ ಎಂದರು.
ಉಡುಪಿ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎ ಗಫೂರ್, ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ. ಕುಂದರ್, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಮುಖಂಡರಾದ ದೇವಕಿ ಸಣ್ಣಯ್ಯ, ಮಮತಾ ದೇವಾಡಿಗ, ಹೆರಿಯಣ್ಣ ಚಾತ್ರಬೆಟ್ಟು, ರೋನಿ ಉಡುಪಿ, ರೋಶನಿ ಒಲೆವೇರ, ಇಚ್ಛಿತಾರ್ಥ ಶೆಟ್ಟಿ, ಉಸ್ತಾದ್ ಅಹಮದ್, ಸತೀಶ್ ಶೆಟ್ಟಿ, ದೇವಾನಂದ್ ಶೆಟ್ಟಿ, ವಿಕಾಸ್ ಹೆಗ್ಡೆ, ಅಜಿತ್ ಶೆಟ್ಟಿ, ರಾಜು ಪೂಜಾರಿ ಪಾರಂಪಳ್ಳಿ, ಶ್ರೀನಿವಾಸ್ ಅಮೀನ್, ಬಾಲಕೃಷ್ಣ ಪೂಜಾರಿ, ಮಲ್ಲಿಕಾ ಪೂಜಾರಿ, ದಿನೇಶ್ ಬಂಗೇರ, ಗಣೇಶ್ ನೆಲ್ಲಿಬೆಟ್ಟು ಮತ್ತಿತರರು ಉಪಸ್ಥಿತರಿದ್ದರು. ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಕಾನ್ಮಕ್ಕಿ ಸ್ವಾಗತಿಸಿದರು. ವಿನೋದ್ ಕಾಸ್ತಾ ನಿರೂಪಿಸಿದರು.
ಕೋಟ ಬ್ಲಾಕ್ ಕಾಂಗ್ರೆಸ್ ಇಂದಿರಾ ಕಚೇರಿಯಿಂದ ಹೊರಟು ಸಾಲಿಗ್ರಾಮದ ಪೇಟೆಯ ಆಂಜನೇಯ ದೇವಸ್ಥಾನದ ಮಾರ್ಗದ ಮೂಲಕ ಹಾದುಹೋಗಿ ಕೋಟತಟ್ಟು ಕೋಟ ಮಾರ್ಗವಾಗಿ ತೆಕ್ಕಟ್ಟೆಯಲ್ಲಿ ಪಾದಯಾತ್ರೆ ಸಮಾಪನಗೊಂಡಿತು. ಕಾಲುನೋವಿನ ಲೆಕ್ಕಿಸದೆ ಮಾಜಿ ಶಾಸಕ ಗೋಪಾಲ ಪೂಜಾರಿ ಪಾದಯಾತ್ರೆಯಲ್ಲಿ ಭಾಗವಹಿಸಿ ಕಾರ್ಯಕರ್ತರಲ್ಲಿ ಹುರುಪು ತುಂಬಿದರು.