ಜಿಲ್ಲೆ

ಕಾರಂತರು ಜನರಿಂದ ಸಾರ್ವತ್ರಿಕ ಗೌರವ ಪಡೆದ ವ್ಯಕ್ತಿ

ಉಡುಪಿ: ಹಿರಿಯ ಸಾಹಿತಿ ಶಿವರಾಮ ಕಾರಂತರು ಜನರಿಂದ ಸಾರ್ವತ್ರಿಕ ಗೌರವ ಪಡೆದ ವ್ಯಕ್ತಿ. ಅವರದ್ದು ಅಳತೆಗೆ ನಿಲುಕದ ವ್ಯಕ್ತಿತ್ವ. ಶಾಲಾ ದಿನಗಳಿಂದಲೂ ಹೋರಾಟದ ಕಿಚ್ಚು ಹತ್ತಿಸಿಕೊಂಡಿದ್ದ ಅವರು ಅನ್ಯಾಯವನ್ನು ಗಟ್ಟಿಧ್ವನಿಯಲ್ಲಿ ವಿರೋಧಿಸುವ ಸ್ವಭಾವದವರಾಗಿದ್ದರು ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ನ ಸ್ಥಾಪಕ ಅಧ್ಯಕ್ಷ ಎಎಸ್​ಎನ್​ ಹೆಬ್ಬಾರ್​ ಹೇಳಿದರು.

ಯಕ್ಷಗಾನ ಕೇಂದ್ರ ಇಂದ್ರಾಳಿ, ಮಣಿಪಾಲ ಅಕಾಡೆಮಿ ಆಫ್​ ಹೈಯರ್​ ಎಜುಕೇಶನ್​ ಆಶ್ರಯದಲ್ಲಿ ಉಡುಪಿಯ ಐವೈಸಿ ಯಕ್ಷಗಾನ ಕಲಾರಂಗ ಸಭಾಂಗಣದಲ್ಲಿ ನಡೆದ ಕೋಟ ಡಾ. ಶಿವರಾಮ ಕಾರಂತ ಅವರ 122ನೇ ಜನ್ಮದಿನಾಚರಣೆಯಲ್ಲಿ ಅವರು ಕಾರಂತ ಸಂಸ್ಮರಣೆ ಮಾಡಿದರು.

ತುರ್ತುಪರಿಸ್ಥಿತಿ ವಿರೋಧಿಸಿ ತಮಗೆ ಲಭಿಸಿದ್ದ ಪದ್ಮಭೂಷಣ ಪ್ರಶಸ್ತಿಯನ್ನೇ ಸರ್ಕಾರಕ್ಕೆ ವಾಪಾಸು ನೀಡಿದ್ದ ಕಾರಂತರ ಪತ್ರಕ್ಕೆ ಸರ್ಕಾರ ಹಾಗೂ ಅಧಿಕಾರಿಗಳ ಮಟ್ಟದಲ್ಲಿ ವಿಶೇಷ ಮಾನ್ಯತೆ ಇತ್ತು. ಅವರಿಗೆ ದೇವರಲ್ಲಿ ವಿಶೇಷ ಭಕ್ತಿಯಿರಲಿಲ್ಲ. ಆದರೂ ಜನರ ನಂಬಿಕೆಯನ್ನು ಗೌರವಿಸುತ್ತಿದ್ದರು. ದೇವಸ್ಥಾನಗಳು ಸಮಾಜದ ಅಂಗ. ಅದನ್ನು ಚೆನ್ನಾಗಿ ನಡೆಸಿಕೊಂಡು ಹೋಗಬೇಕು ಎಂಬ ಭಾವನೆ ಅವರದಾಗಿತ್ತು. ಹೀಗಾಗಿ ಸಾಲಿಗ್ರಾಮ ದೇವಸ್ಥಾನ ಹಾಗೂ ಕೊಲ್ಲೂರು ದೇವಸ್ಥಾನದ ವಿಚಾರದಲ್ಲಿ ಧ್ವನಿ ಎತ್ತಿದ್ದರು ಎಂದರು.

ಕಾರಂತರ ಪುತ್ರ ಹಾಗೂ ವನ್ಯಜಿವಿ ತಜ್ಞ ಡಾ. ಕೆ.ಉಲ್ಲಾಸ್​ ಕಾರಂತ ಮಾತನಾಡಿ, ನಮ್ಮ ದೇಶದಲ್ಲಿ ನಿಸರ್ಗದ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆದಿಲ್ಲ. ಸುತ್ತಲಿನ ಪರಿಸರವನ್ನು ದಾಖಲೀಕರಣ ಮಾಡಿದ್ದು ಕಡಿಮೆ. ವಿದೇಶಿಗರು ಇಂಥ ಸಾಧನೆ ಮಾಡಿದ್ದಾರೆ. ನಮ್ಮ ತಂದೆಗೆ ಪ್ರಾಣಿ ಮತ್ತು ಪಗಳ ಆಸಕ್ತಿ ಇತ್ತು. ಕಾರಂತರು ಪ್ರಕೃತಿಪ್ರೇಮಿಯಾಗಿದ್ದರು. ಈ ದಿಸೆಯಲ್ಲಿ ಸಾಧನೆ ಮಾಡಲು ನನಗೂ ಪ್ರೇರಣೆಯಾಗಿದ್ದರು ಎಂದರು.

ಮಾಹೆಯ ಸಹಕುಲಾಧಿಪತಿ ಡಾ. ಎಚ್​.ಎಸ್​. ಬಲ್ಲಾಳ್​ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಹೆಯ ಕುಲಪತಿ ಲೆ.ಜ. ಡಾ. ಎಂ.ಡಿ. ವೆಂಕಟೇಶ್​, ಸಹಕುಲಪತಿ ಡಾ.ನಾರಾಯಣ ಸಭಾಹಿತ್​ ಉಪಸ್ಥಿತರಿದ್ದರು. ಯಕ್ಷಗಾನ ಕೇಂದ್ರ ಸಲಹಾ ಸಮಿತಿ ಅಧ್ಯಕ್ಷ ಪಳ್ಳಿ ಕಿಶನ್​ ಹೆಗ್ಡೆ ಸ್ವಾಗತಿಸಿ, ಅಡಳಿತಾಧಿಕಾರಿ ಡಾ. ಬಿ.ಜಗದೀಶ್​ ಶೆಟ್ಟಿ ವಂದಿಸಿದರು. ಉಪನ್ಯಾಸಕ ರಾವೇಂದ್ರ ತುಂಗ ಕಾರ್ಯಕ್ರಮ ನಿರೂಪಿಸಿದರು. ಸಭಾಕಾರ್ಯಕ್ರಮದ ಬಳಿಕ ಯಕ್ಷಗಾನದ ಪ್ರಸಿದ್ಧ ಕಲಾವಿದರಿಂದ "ಅಂಬಾಶಪಥ' ಯಕ್ಷಗಾನ ಪ್ರದರ್ಶನ ನಡೆಯಿತು.