ವಿಜಯಪುರ: ನಗರದ ದರ್ಗಾ ರಸ್ತೆಯಲ್ಲಿರುವ ಕೇಂದ್ರ ಕಾರ್ಯಾಗೃಹಕ್ಕೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಶುಕ್ರವಾರ ಭೇಟಿ ನೀಡಿದರು.
ಮಹಿಳಾ ಮತ್ತು ಪುರುಷ ಕೈದಿಗಳ ಸೆಲ್‌ಗಳ ಪರಿಶೀಲನೆ ನಡೆಸಿದರು. ಅಲ್ಲದೇ ಕೈದಿಗಳ ಆರೋಗ್ಯ, ಆಹಾರ, ಮೂಲ ಸೌಕರ್ಯಗಳ ಕುರಿತ ಮಾಹಿತಿ ಪಡೆದುಕೊಂಡರು. ಗ್ರಂಥಾಲಯಕ್ಕೆ ತೆರಳಿ, ಎಲ್ಲ ದಿನಪತ್ರಿಕೆಗಳು, ಉತ್ತಮ ಪುಸ್ತಕಗಳನ್ನ ಖರೀದಿಸಿ ಕೈದಿಗಳ ಜ್ಞಾನಾರ್ಜನೆಗೆ ಅವಕಾಶ ಮಾಡುವ ಜತೆಗೆ ಅವರ ಮನಪರಿವರ್ತನೆ ಮಾಡುವಲ್ಲಿ ಅಧಿಕಾರಿಗಳು ಶ್ರಮಿಸಬೇಕು ಎಂದರು.
ಕಾರ್ಯಾಗೃಹ ಮತ್ತು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಹಾಗೂ ಕೈದಿಗಳೊಂದಿಗೆ ಸಂವಾದ ನೆಡೆಸಿ ಅವರ ಮಕ್ಕಳ ಮಾಹಿತಿ ಕಲೆ ಹಾಕಿ ಅವರ ಶಿಕ್ಷಣ, ಆರೋಗ್ಯ ಮತ್ತು ರಕ್ಷಣೆಯ ಜತೆಗೆ ಮಕ್ಕಳ ಸ್ಥಿತಿಗತಿಗಳ ಕುರಿತು ಪರಿಹಾರ ಕ್ರಮಗಳನ್ನು ಕೈಗೊಂಡು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸಲು ಸೂಚಿಸಿದರು.
ಕಾರ್ಯಾಗೃಹದ ಪ್ರಭಾರ ಅಧೀಕ್ಷಕ ಮಂಜುನಾಥ ಎಚ್.ಜಿ., ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾಕ್ಷಿ ಜಾನಕಿ, ಮೌನೇಶ ಪೊತದಾರ ಹಾಗೂ ಅಧಿಕಾರಿಗಳು ಇದ್ದರು.