ಮಡಿಕೇರಿ: ಕರೊನಾ ಇಷ್ಟೊಂದು ಕ್ರೂರಿ ಎಂದು ಗೊತ್ತಿರಲಿಲ್ಲ. ಪುಟ್ಟ ಜಿಲ್ಲೆ ಕೊಡಗಿನಲ್ಲಿ ಇಷ್ಟೊಂದು ದುಷ್ಪರಿಣಾಮವುಂಟು ಮಾಡುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಉಸ್ತುವಾರಿ ಸಚಿವ ವಿ. ಸೋಮಣ್ಣ ಕಳವಳ ವ್ಯಕ್ತ ಪಡಿಸಿದರು.
ಕೊಡಗು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕೋವಿಡ್ ಸ್ಥಿತಿಗತಿ ಅವಲೋಕನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಧಿಕಾರಿಗಳು, ಜನಪ್ರತಿನಿಧಿಗಳು ಸೇರಿದ್ದಂತೆ ಎಲ್ಲರೂ ಒಗ್ಗೂಡು ಪರಿಸ್ಥಿತಿ ಎದುರಿಸಬೇಕು. ಶೀಘ್ರ ಜಿಲ್ಲೆಯಲ್ಲಿ 200 ಹೆಚ್ಚುವರಿ ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗುವುದೆಂದು ಭರವಸೆ ನೀಡಿದರು.
ವೈದ್ಯರು, ದಾದಿಯರು ಸೇರಿದ್ದಂತೆ ಅಗತ್ಯ ಇರುವ ಸಿಬ್ಬಂದಿ ನೇಮಕ ಮಾಡಿಕೊಳ್ಳುವ ಅಧಿಕಾರ ಜಿಲ್ಲಾಧಿಕಾರಿಗೆ ನೀಡಿದರು. ಜಿಲ್ಲೆಗೆ ಬೇಕಾದ ಸವಲತ್ತುಗಳ ಪಟ್ಟಿ ಉಸ್ತುವಾರಿ ಕಾರ್ಯದರ್ಶಿ ಮೂಲಕ ಸಲ್ಲಿಸುವಂತೆ ಸೂಚನೆ ನೀಡಿದರು. ಸರ್ಕಾರದಿಂದ ಆಗಬೇಕಾಗಿರುವ ಕೆಲಸ ಮಾಡಿಕೊಡುತ್ತೇನೆ. ಪ್ರತಿಕೂಲ ಪರಿಸ್ಥಿತಿ ಒಟ್ಟಾಗಿ ಎದುರಿಸುವ ಎಂದು ಸಚಿವರು ಹೇಳಿದರು.