ಜಿಲ್ಲೆ

ಜಯಮಂಗಲಿ ನದಿ ಒಡಲಿನ ಮರಳು ಅಕ್ರಮ ಸಾಗಾಣೆಗೆ ತಹಸೀಲ್ದಾರ್ ಬ್ರೇಕ್

ಕೊರಟಗೆರೆ: ಜಯಮಂಗಲಿ ನದಿಯ ಒಡಲಿಗೆ ಕನ್ನಹಾಕಿ ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದ ಅಡ್ಡೆಯ ಮೇಲೆ ಕೊರಟಗೆರೆ ತಹಸೀಲ್ದಾರ್ ಮುನಿಶಾಮಿರೆಡ್ಡಿ ನೇತೃತ್ವದ ತಂಡ ದಾಳಿ ನಡೆಸಿ ಟ್ರಾೃಕ್ಟರ್ ಮತ್ತು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.

ತಾಲೂಕಿನ ಕೋಳಾಲ ಹೋಬಳಿ ವಜ್ಜನಕುರಿಕೆ ಗ್ರಾಪಂ ವ್ಯಾಪ್ತಿಯ ಮೊರಗಾನಹಳ್ಳಿ ಮತ್ತು ಕೆ.ಜಿ.ಬೇವಿನಹಳ್ಳಿ ಮೂಲಕ ಹರಿಯುವ ಜಯಮಂಗಲಿ ನದಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮರಳು ಅಡ್ಡೆಯ ಮೇಲೆ ತಹಸೀಲ್ದಾರ್ ಮುನಿಶಾಮಿರೆಡ್ಡಿ ನೇತೃತ್ವದ ತಂಡ ತಡರಾತ್ರಿ ಮಿಂಚಿನ ದಾಳಿ ನಡೆಸಿದ್ದಾರೆ. ಗ್ರಾಮದ ಹೊರವಲಯದಲ್ಲಿ ಟ್ರಾೃಕ್ಟರ್ ಮೂಲಕ ಸಾಕಾಣಿಕೆ ಮಾಡಿದ ಬಳಿಕ ಮಧ್ಯರಾತ್ರಿ ಹೊತ್ತು ಲಾರಿಗೆ ತುಂಬಿ ಕೋಳಾಲ ಮಾರ್ಗವಾಗಿ ಬೆಂಗಳೂರಿಗೆ ಸಾಗಿಸಲಾಗುತ್ತದೆ.

ಮೊರಗಾನಹಳ್ಳಿ ಸಮೀಪವೇ ಹರಿಯುವ ಜಯಮಂಗಲಿ ನದಿಯ ದೊಡ್ಡ ಹಳ್ಳದಲ್ಲಿ ಕೊರಟಗೆರೆ ತಹಸೀಲ್ದಾರ್ ಕಳೆದೊಂದು ತಿಂಗಳಲ್ಲಿ ಎರಡು ಬಾರಿ ದಾಳಿ ನಡೆಸಿದ್ದರೂ ಎಗ್ಗಿಲ್ಲದೆ ಮರಳು ದಂಧೆ ಸಾಗಿದೆ. ಮರಳು ಗಣಿಗಾರಿಕೆ ಮಾಹಿತಿ ಸ್ಥಳೀಯ ಅಧಿಕಾರಿಗಳಿಗಿದ್ದರು ಮೌನವಹಿಸಿರುವುದು ಹಲವು ಅನುಮಾಗಳಿಗೆ ಎಡೆಮಾಡಿಕೊಟ್ಟಿದೆ.