ವಿಜಯವಾಣಿ ಸುದ್ದಿಜಾಲ ಮೂಲ್ಕಿ
ಸೂಕ್ತ ಜಾಗದ ಹಕ್ಕುಪತ್ರಕ್ಕಾಗಿ ಕಳೆದ 3 ದಿನಗಳಿಂದ ಮೂಲ್ಕಿ ತಹಸೀಲ್ದಾರ್ ಕಚೇರಿ ಮುಂಭಾಗ ಟೆಂಟ್ ಹಾಕಿ ಆಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದ 30 ಕೊರಗ ಕುಟುಂಬಗಳ ಸದಸ್ಯರು ಶುಕ್ರವಾರ ಸಂಜೆ ಶಾಸಕ ಉಮಾನಾಥ ಎ.ಕೋಟ್ಯಾನ್ ಜತೆ ಮಾತುಕತೆ ನಡೆಸಿದ ಬಳಿಕ ಪ್ರತಿಭಟನೆ ಮುಕ್ತಾಯಗೊಳಿಸಿದ್ದಾರೆ.
ಕರ್ನಾಟಕ- ಕೇರಳ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ, ಕಿನ್ನಿಗೋಳಿ ಕೊರಗ ಅಭಿವೃದ್ಧಿ ಸಂಘದ ನೇತೃತ್ವದಲ್ಲಿ ಭೂಮಿಯ ಹಕ್ಕುಪತ್ರಕ್ಕಾಗಿ 30 ಕೊರಗ ಕುಟುಂಬಗಳು ಸೆ.18ರಿಂದ ಆಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರು.
ಜಿಲ್ಲಾಡಳಿತ ಸಹಿತ ತಾಲೂಕು ತಹಸೀಲ್ದಾರ್, ಐಟಿಡಿಪಿ ಅಧಿಕಾರಿಗಳು ಧರಣಿ ನಿರತರ ಮನವೊಲಿಸಲು ಸತತ ಪ್ರಯತ್ನ ನಡೆಸಿದ್ದರೂ ಫಲಕಾರಿಯಾಗಿರಲಿಲ್ಲ. ಮಾಹಿತಿ ತಿಳಿದ ಶಾಸಕ ಉಮಾನಾಥ ಎ.ಕೋಟ್ಯಾನ್ ಶುಕ್ರವಾರ ಚುಣಾವಣಾ ನೀತಿ ಸಂಹಿತೆಯ ಕಾರಣ ಖಾಸಗಿ ವಾಹನದಲ್ಲಿ ಆಗಮಿಸಿ ಧರಣಿ ನಿರತರ ಅಹುವಾಲು ಸ್ವೀಕರಿಸಿ, ಕೊಲ್ಲೂರುಪದವು ಬಳಿ ಮಂಜೂರಾದ 7.04 ಎಕರೆ ಜಮೀನನ್ನು 3 ತಿಂಗಳ ಒಳಗೆ ಸಮತಟ್ಟುಗೊಳಿಸಿ ಎಲ್ಲ 30 ಕುಟುಂಬಗಳಿಗೆ ಹಕ್ಕುಪತ್ರ ಹಾಗೂ ಮನೆ ಕಟ್ಟಿಕೊಡಲು ಅಧಿಕಾರಿಗಳಲ್ಲಿ ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ಸದ್ಯ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ಆಶ್ವಾಸನೆ ನೀಡಲಾಗುವುದಿಲ್ಲ. ನನ್ನ ಕರ್ತವ್ಯ ಎಂದು ಪರಿಗಣಿಸಿ ಮಾಡುತ್ತೇನೆ ಎಂದರು.
ಈ ಹಿಂದೆಯೂ ನಮಗೆ ಸುಳ್ಳು ಆಶ್ವಾಸನೆಗಳನ್ನು ನೀಡಿ ಸತಾಯಿಸಿದ್ದಾರೆ. ಕಷ್ಟಜೀವಿಗಳಾದ ನಾವು ಮನೆ ಕೊಡುವವರೆಗೆ ಕಷ್ಟದಲ್ಲೇ ಇರುತ್ತೇವೆ ಎಂದು ಕೊರಗ ಕುಟಂಬಗಳು ಅಹವಾಲು ತೋಡಿಕೊಂಡಿದ್ದು, 3 ತಿಂಗಳೊಳಗೆ ಹಕ್ಕುಪತ್ರ ದೊರೆಯದಿದ್ದಲ್ಲಿ ತನ್ನ ಮನೆ ಮುಂದೆಯೇ ಧರಣಿ ನಡೆಸಿ ಎಂದು ಶಾಸಕರು ಹೇಳಿದ ಬಳಿಕ ಕುಟುಂಬಗಳು ಪ್ರತ್ಯೇಕ ಸಭೆ ನಡೆಸಿ ಧರಣಿ ಮುಕ್ತಾಯದ ತೀರ್ಮಾನಕ್ಕೆ ಬಂದರು.
ಕೆ.ಪುತ್ರನ್ ಮಾತನಾಡಿ, ಶಾಸಕರ ಮನವಿಗೆ ಸ್ಪಂದಿಸಿದ್ದೇವೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಆಶ್ವಾಸನೆ ನೀಡಿಲ್ಲ. ಆದರೆ ಚುನಾವಣೆ ಮುಗಿದ ತಕ್ಷಣ ನಮ್ಮ ಸಮಸ್ಯೆ ಬಗೆಹರಿಸುವ ಆಶ್ವಾಸನೆ ನೀಡಿದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಧರಣಿ ಮುಂದೂಡುತ್ತಿದ್ದೇವೆ. ಚುನಾವಣೆ ಮುಗಿದ ತಕ್ಷಣ ಶಾಸಕರ ಬಳಿಗೆ ತೆರಳಿ ನಮ್ಮ ಸಮಸ್ಯೆ ಬಗ್ಗೆ ಮಾತನಾಡುತ್ತೇವೆ. ಇತ್ಯರ್ಥವಾಗದಿದ್ದಲ್ಲಿ ನಮ್ಮ ಆಹೋರಾತ್ರಿ ಧರಣಿ ಮುಂದುವರಿಸುತ್ತೇವೆ ಎಂದರು.
ಪ್ರಮುಖರಾದ ಸುನೀಲ್ ಆಳ್ವ, ಸತೀಶ್ ಅಂಚನ್, ಸುಭಾಷ್ ಶೆಟ್ಟಿ, ಶೈಲೇಶ್ ಕುಮಾರ್, ಪುತ್ತುಬಾವ, ವಿಠಲ ಎನ್.ಎಂ., ಹರಿಶ್ಚಂದ್ರ ಕೋಟ್ಯಾನ್, ಪ್ರಶಾಂತ್ ಬಸವರಾಜ್ ಜಾಂಬೂರ, ಸುನೀಲ್ ಇಟಗಿ, ಪ್ರಶಾಂತ್, ಶ್ಯಾಂಪ್ರಸಾದ್, ಸುಂದರ ಗುತ್ತಕಾಡು, ಕೆ.ಪುತ್ರನ್, ಸುಶೀಲಾ, ನರಸಿಂಹ, ಸುಪ್ರಿಯಾ ಮತ್ತಿತರರು ಉಪಸ್ಥಿತರಿದ್ದರು.