ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ಸಂಶೋಧಕರು ಇತ್ತೀಚೆಗೆ ನಡೆಸಿದ ಅಧ್ಯಯನವೊಂದರಲ್ಲಿ ಉತ್ತರ ದ್ರಾವಿಡ ಭಾಷೆಗಳು ಮತ್ತು ಕೊರಗ ಭಾಷೆಯ ಅನುವಂಶಿಕ ವ್ಯಾಕರಣ ಲಕ್ಷಣಗಳಲ್ಲಿ ಸಾಮ್ಯತೆ ಕಂಡುಬಂದಿದೆ. ಪಾಕಿಸ್ತಾನದಲ್ಲಿ 2000 ಕಿಮೀ ದೂರದಲ್ಲಿರುವ ಬ್ರಾಹುಯಿಯೊಂದಿಗೆ ಭಾಷಾ ಹೋಲಿಕೆ ಇರುವುದು ಅಚ್ಚರಿ ಮೂಡಿಸಿದೆ.
ಕೊರಗರ ಮಾತೃ ಸಂಬಂಧಿ ಜೀನೋಮ್ಗಳ (ಡಿಎನ್‌ಎ) ಕುರಿತು ನಡೆಸಿದ ಅಧ್ಯಯನದಲ್ಲಿ ಕೊರಗ ಭಾಷೆ ಸಿಂಧೂ ನಾಗರಿತೆಯ
ಅವನತಿಯ ಸಮಯದಲ್ಲಿ ದಕ್ಷಿಣದ ಕಡೆಗೆ ಹೋದ ಒಂದು ಮಾತೃಭಾಷೆಯನ್ನು ಪ್ರತಿನಿಧಿಸುತ್ತದೆ ಎಂದು ತಿಳಿದುಬಂದಿದೆ.
ಕೊರಗರ ಅನುವಂಶಿಕತೆಯು ನಮಗೆ ಹಿಂದಿನ ಕನಿಷ್ಠ ಎರಡು ನಿರ್ಣಾಯಕ ಕಾಲಾವಧಿಗಳನ್ನು ತಿಳಿಸುತ್ತದೆ. ಮಾತೃ ಸಂಬಂಧಿ ವಂಶವಾಹಿ ಸಂಗ್ರಹ (ಜೀನ್‌ಪೂಲ್) ಸುಮಾರು 16,000 ವರ್ಷಗಳ ಹಿಂದಿನ ಪ್ಲೀಸ್ಟೋಸೀನ್ ಯುಗಕ್ಕೆ ಸಂಬಂಧಿಸಿದ್ದರೆ, ಪಿತೃ ವಂಶವಾಹಿ ಸಂಗ್ರಹವು ಸುಮಾರು 30,000 ವರ್ಷಗಳ ಹಿಂದಿನ ಕೊನೆಯ ಗ್ಲೇಶಿಯಲ್ ಗರಿಷ್ಠ ಯುಗಕ್ಕೆ ಸೇರಿರುತ್ತದೆ ಎಂದು ಅಧ್ಯಯನ ಪ್ರಮುಖ ಲೇಖಕ ಜೈಸನ್ ಸಿಕ್ವೇರಾ ತಿಳಿಸಿದ್ದಾರೆ.
ಅಧ್ಯಯನದ ಸಹ ಲೇಖಕಿ ಮಂಗಳೂರು ವಿಶ್ವವಿದ್ಯಾನಿಲಯದ ಅನ್ವಯಿಕ ಪ್ರಾಣಿ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಮುಸ್ತಾಕ್.ಎಂ.ಎಸ್. ಅವರ ಪ್ರಕಾರ ದಕ್ಷಿಣ ಭಾರತದ ಪ್ರಾಚೀನ ಡಿಎನ್‌ಎ ದೊರೆಯದಿರುವಾಗ ಈ ಪ್ರಾಚೀನ ಬುಡಕಟ್ಟು ಸಮುದಾಯ ಉತ್ತಮ ಬದಲಿ ಪ್ರತಿನಿಧಿಯಾಗಿ ಕಂಡುಬರುತ್ತಿದೆ ಎನ್ನುತ್ತಾರೆ/
ಪ್ರಸಿದ್ಧ ಭಾಷಾಶಾಸ್ತ್ರಜ್ಞ ಸ್ವಿಝರ್‌ಲ್ಯಾಂಡ್‌ನ ಬರ್ನ್ ವಿಶ್ವವಿದ್ಯಾಲಯದ ಡಾ. ಜಾರ್ಜ್ ವಾನ್ ಡ್ರೆಮ್ , ಯೇನೆಪೊಯ ಡೀಮ್ಡ್ ಟು ಬಿ ವಿ.ವಿ.ಯ ಡಾ. ವಿನುತಲಕ್ಷ್ಮಿ ಮತ್ತು ಡಾ. ರಣಜಿತ್‌ದಾಸ್ ಈ ಪ್ರಬಂಧದ ಸಹ ಲೇಖಕರಾಗಿದ್ದಾರೆ. ಈ ಸಂಶೋಧನಾ ಪ್ರಬಂಧ, ಪ್ರತಿಷ್ಠಿತ ಫ್ರಾಂಟಿಯರ್ಸ್ ಇನ್ ಜೆನೆಟಿಕ್ಸ್‌ನಲ್ಲಿ ಪ್ರಕಟಗೊಂಡಿದೆ.
ಕೊರಗ ಬುಡಕಟ್ಟು ಮುಖ್ಯವಾಗಿ ಕರ್ನಾಟಕದ ದ.ಕ. ಮತ್ತು ಉಡುಪಿ ಜಿಲ್ಲೆಗಳ ಭಾಗಗಳಲ್ಲಿ, ಕೇರಳದ ಕಾಸರಗೋಡು ಜಿಲ್ಲೆ
ಉತ್ತರ ಕನ್ನಡದ ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳಲ್ಲಿ ಕಂಡುಬರುತ್ತದೆ. ಅದು ಈ ಭಾಗದ ಅತ್ಯಂತ ಬಡ ಮತ್ತು ಅಳಿವಿನ ಅಂಚಿನಲ್ಲಿರುವ ಬುಡಕಟ್ಟುಗಳಲ್ಲಿ ಒಂದಾಗಿದೆ ಎಂದು ಪ್ರಕಟಣೆ ತಿಳಿಸಿದೆ.