ಕೊಪ್ಪಳ: ಯೋಗ ನಮ್ಮ ಪುರಾತನ ಕಲೆಯಾಗಿದ್ದು, ಎಂದೆಂದಿಗೂ ಅದರ ಮಹತ್ವ ಕಳೆದುಕೊಳ್ಳುವುದಿಲ್ಲ ಎಂದು ಪತಂಜಲಿ ಯೋಗ ಸಮಿತಿ ರಾಜ್ಯ ಪ್ರಭಾರ ಭವರಲಾಲ್ ಆರ್ಯ ಹೇಳಿದರು.
ನಗರದ ಗವಿಮಠ ಆವರಣದಲ್ಲಿ ಲಿಂ.ಶಿವಶಾಂತವೀರ ಸ್ವಾಮೀಜಿ ಪುಣ್ಯಸ್ಮರಣೆ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಯೋಗ ಹಾಗೂ ಪ್ರಾಣಾಯಾಮ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ನಮ್ಮ ಪೂರ್ವಜರಿಂದಲೂ ಯೋಗ ಅನುಷ್ಠಾನದಲ್ಲಿದೆ. ಇಂದಿಗೂ ತನ್ನ ಮಹತ್ವ ಕಳೆದುಕೊಂಡಿಲ್ಲ. ಮುಂದೆಯೂ ಕಳೆದುಕೊಳ್ಳುವುದಿಲ್ಲ. ಮನುಷ್ಯ ಇರುವವರೆಗೆ ದೇಹ ಮತ್ತು ಮನಸ್ಸಿನ ಆರೋಗ್ಯ ಕಾಪಾಡಿಕೊಳ್ಳಬೇಕು. ಅಲ್ಲಿವರೆಗೂ ಯೋಗದ ಅವಶ್ಯಕತೆ ಇರುತ್ತದೆ. ಶ್ರೀಗಳ ಪಣ್ಯಸ್ಮರಣೆ ಅಂಗವಾಗಿ ಒಂದುವಾರ ನಿತ್ಯ ಬೆಳಗ್ಗೆ 5ರಿಂದ 7ಗಂಟೆವರೆಗೆ ಉಚಿತ ಯೋಗ, ಪ್ರಾಣಾಯಾಮ ಹಮ್ಮಿಕೊಂಡಿದ್ದು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಯೋಗ ಸಮಿತಿ ಸದಸ್ಯರಾದ ಶರಣಬಸಪ್ಪ ಚನ್ನಳ್ಳಿ, ಸಿ.ಎಚ್.ಮೀನಾಕ್ಷಿ, ಡಾ.ಎಸ್.ಬಿ.ಹಂದ್ರಾಳ, ಗವಿಸಿದ್ಧೇಶ್ವರ ಆಯುರ್ವೇದಿಕ್ ಕಾಲೇಜು ಪ್ರಾಚಾರ್ಯ ಡಾ.ಬಿ.ಎಸ್.ಸವಡಿ. ಪದವಿ ಕಾಲೇಜು ಪ್ರಾಚಾರ್ಯ ಡಾ.ಚನ್ನಬಸವ, ಡಾ.ಸಿ.ಎಸ್.ಕರಮುಡಿ, ಡಾ.ಪ್ರಭು ನಾಗಲಾಪುರ, ಡಾ.ವೀರೇಶ ಇತರರಿದ್ದರು.