ಕೊಪ್ಪಳದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಐಕ್ಯತಾ ಸಮಾವೇಶವನ್ನು ಅಲೆಮಾರಿ ಸಮುದಾಯದ ಜನರು ಉದ್ಘಾಟಿಸಿದರು.  
ಜಿಲ್ಲೆ

ವಿಮುಕ್ತ ದೇವದಾಸಿಯರಿಗೆ ತಲುಪುತ್ತಿಲ್ಲ ಸೌಲಭ್ಯ: ಹೋರಾಟಗಾರ್ತಿ ದು.ಸರಸ್ವತಿ ಬೇಸರ

Koppal

ಕೊಪ್ಪಳ: ವಿಮುಕ್ತ ದೇವದಾಸಿಯರ ಪುನಶ್ಚೇತನಕ್ಕೆ ಸರ್ಕಾರ ಯೋಜನೆ ರೂಪಿಸಿದರೂ ಸರಿಯಾಗಿ ತಲುಪುತ್ತಿಲ್ಲ. ಪ್ರತಿಯೊಂದಕ್ಕೂ ಹೋರಾಟ ಮಾಡಬೇಕಾದ ಪರಿಸ್ಥಿತಿ ಇದೆ ಎಂದು ಹೋರಾಟಗಾರ್ತಿ ದು.ಸರಸ್ವತಿ ಬೇಸರ ವ್ಯಕ್ತಪಡಿಸಿದರು.

ನಗರದ ಸಾಹಿತ್ಯ ಭವನದಲ್ಲಿ ಸಹಜಾ ಟ್ರಸ್ಟ್, ದೇವದಾಸಿ ವಿಮೋಚನಾ ವೇದಿಕೆ ಸೋಮವಾರ ಹಮ್ಮಿಕೊಂಡಿದ್ದ ಐಕ್ಯತಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಆಧುನಿಕತೆ ಬೆಳೆದರೂ ಮುತ್ತು ಕಟ್ಟುವ ಪದ್ಧತಿ ಸಂಪೂರ್ಣವಾಗಿ ಹೋಗಿಲ್ಲ. ದೇವದಾಸಿಯರ ಜೀವನ ಮಟ್ಟ ಸುಧಾರಣೆಗೆ ಕಾಯ್ದೆ ರಚಿಸಿದರೂ ಪರಿಣಾಕಾರಿಯಾಗಿ ಅನುಷ್ಠಾನವಾಗುತ್ತಿಲ್ಲ. ಎಲ್ಲರಿಗೂ ಸೌಲಭ್ಯಗಳು ತಲುಪುತ್ತಿಲ್ಲ. ಮಾಸಾಶನವೂ ಸರಿಯಾಗಿ ಬರುತ್ತಿಲ್ಲ. ಸಣ್ಣಪುಟ್ಟ ಬೇಡಿಕೆಗಳಿಗೂ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ. ಅವರ ಮಕ್ಕಳಿಗೆ ಶಿಕ್ಷಣ ಹಾಗೂ ಅವರ ಹಕ್ಕು ನೀಡಿದಲ್ಲಿ ಬದುಕು ಕಟ್ಟಿಕೊಳ್ಳಲು ಅನುಕೂಲವಾಗುತ್ತದೆ ಎಂದರು.

ಸಹಜಾ ಟ್ರಸ್ಟ್ ಕಾರ್ಯದರ್ಶಿ ಶೀಲಾ ಹಾಲ್ಕುರಿಕೆ ಮಾತನಾಡಿ, ದೇವದಾಸಿಯರು ಹಾಗೂ ಅಲೆಮಾರಿ ಸಮುದಾಯಗಳಿಗೆ ಸರ್ಕಾರದ ಯೋಜನೆಗಳು ತಲುಪುತ್ತಿಲ್ಲ. ಇಂದಿಗೂ ಎಲ್ಲ ಮಕ್ಕಳಿಗೆ ಶಿಕ್ಷಣ ಪಡೆಯಲಾಗದ ಸ್ಥಿತಿ ಇದೆ. ಅವರ ಮಕ್ಕಳಿಗೆ ಶಿಕ್ಷಣ ನೀಡಲು ಸರ್ಕಾರ ಪ್ರತ್ಯೇಕ ಯೋಜನೆ ರೂಪಿಸುವ ಅಗತ್ಯವಿದೆ ಎಂದರು. ವೇದಿಕೆ ಕಾರ್ಯಕ್ರಮ ಬಳಿಕ ವಿವಿಧ ಗೋಷ್ಠಿಗಳು ನಡೆದವು. ಶಿಕ್ಷಣ, ಅಲೆಮಾರಿಗಳ ಸವಾಲುಗಳು ಮುಂತಾದ ವಿಷಯ ಕುರಿತು ಗಣ್ಯರು ಚರ್ಚೆ ನಡೆಸಿದರು.

ನಗರಸಭೆ ಅಧ್ಯಕ್ಷೆ ಶಿವಗಂಗಾ ಭೂಮಕ್ಕನವರ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ವೈ.ಎ.ಕಾಳೆ, ಎಚ್‌ಐಡಿಎಫ್‌ನ ನಿರ್ದೇಶಕಿ ಅಂಜಲಿ, ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರು, ಸಾವಿತ್ರಿ ಮುಜುಮದಾರ್, ಮಾದಿಗ ದಂಡೋರ ರಾಜ್ಯ ಕಾರ್ಯದರ್ಶಿ ಕೆ.ಎಸ್.ಮೈಲಾರಪ್ಪ, ದೇವದಾಸಿ ವಿಮೋಚನಾ ವೇದಿಕೆ ಅಧ್ಯಕ್ಷೆ ಸೌಭಾಗ್ಯ ದೊಡ್ಡಮನಿ, ಕಾರ್ಯದರ್ಶಿ ಶಶಿಕಲಾ ಮಠದ ಇತರರಿದ್ದರು.