ಕೊಪ್ಪಳ: ಪಂಚಮಸಾಲಿ ಸಮುದಾಯಕ್ಕೆ ಸರ್ಕಾರ 2ಎ ಮೀಸಲಾತಿ ನೀಡಬೇಕು. ಇಲ್ಲದಿದ್ದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದರು.
ತಾಲೂಕಿನ ಓಜನಳ್ಳಿ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವೀರರಾಣಿ ಕಿತ್ತೂರು ಚನ್ನಮ್ಮ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮದು ರೈತಾಪಿ ಸಮುದಾಯ. ತಾಯಿನಾಡಿಗಾಗಿ ಚನ್ನಮ್ಮ ಹೋರಾಡಿದರು. ಬೆಳವಡಿ ಮಲ್ಲಮ್ಮ ಶಿವಾಜಿಗೆ ರಾಕಿ ಕಟ್ಟಿ ಸಹೋದರತ್ವ ಮೆರೆದರು. ದೇಶದ ವಿವಿಧೆಡೆ ಹಲವು ಹೆಸರುಗಳಲ್ಲಿ ಸಮುದಾಯ ಹರಡಿಕೊಂಡಿದೆ. ಶೈಕ್ಷಣಿಕ ಮತ್ತು ಔದ್ಯೋಗಿಕವಾಗಿ ಹಿಂದುಳಿದಿದ್ದು, 2ಎ ಮೀಸಲಾತಿ ಬೇಕೇ ಬೇಕು. ಇದರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಎಲ್ಲರೂ ಒಗ್ಗಟ್ಟಾಗಿರೋಣ. ಹಿಂದುಳಿದ ವರ್ಗಗಳ ಆಯೋಗಕ್ಕೆ ವರದಿ ಸಲ್ಲಿಸಲಾಗಿದೆ. ಸರ್ಕಾರ ಇದೇ ತಿಂಗಳಲ್ಲಿ ಸ್ಪಷ್ಟವಾಗಿ ತನ್ನ ನಿಲುವು ತಿಳಿಸಬೇಕು. ಇಲ್ಲಿದ್ದಲ್ಲಿ ಅದರ ಪರಿಣಾಮ ಎದುರಿಸಲು ಸಿದ್ಧವಾಗಬೇಕು. ಪ್ರಣಾಳಿಕೆಯಲ್ಲಿ ಮೀಸಲು ನೀಡಿಕೆ ಅಂಶ ಸೇರಿಸಬೇಕೆಂದು ಒತ್ತಾಯಿಸಿದರು.
ಸಕ್ಕರೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಮಾತನಾಡಿ, ನಾನು ಸಚಿವನಾಗಿ ಇಲ್ಲಿ ಬಂದಿಲ್ಲ. ಸಮುದಾಯದ ಬಂಧುವಾಗಿ ಬಂದಿರುವೆ. ನಮ್ಮದು ಇನ್ನೊಬ್ಬರಿಗೆ ಕೇಡು ಮಾಡದಂಥ ಸಮುದಾಯ. ಎಲ್ಲ ಸ್ವಾಮೀಜಿಗಳ ಸಂಘಟನೆಯಯಿಂದ ಸಮುದಾಯ ಒಗ್ಗಟ್ಟಾಗಿದೆ. ಸರ್ಕಾರ ಒಳ್ಳೆಯ ನಿರ್ಧಾರ ತೆಗೆದುಕೊಳ್ಳಲಿದೆ. ಆಶಾವಾದಿಗಳಾಗಿ ಕಾಯಿರಿ ಎಂದು ನಿರೀಕ್ಷೆ ಮೂಡಿಸಿದರು.
ಗಣಿ ಮತ್ತು ಭು ವಿಜ್ಞಾನ ಸಚಿವ ಹಾಲಪ್ಪ ಆಚಾರ್ ಮಾತನಾಡಿ, ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಸಂಸ್ಕೃತಿ ಪಂಚಸಾಲಿಗರದ್ದು. ಸಂಸದ ಸಂಗಣ್ಣ ಕರಡಿ ಎಲ್ಲರನ್ನು ಪ್ರೀತಿಸುವ ವ್ಯಕ್ತಿ. ಇತರರು ಅವರ ಗುಣಗಳನ್ನು ಪಾಲಿಸುವಂತ ಆಡಳಿತಗಾರ. ಮೀಸಲಾತಿ ನೀಡಿಕೆ ವಿಚಾರ ಹಲವು ಬಾರಿ ಚರ್ಚೆಯಾಗಿದ್ದು, ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.
ಕೊಪ್ಪಳದಿಂದ ಓಜನಳ್ಳಿವರೆಗೆ ಮೆರಣಿಗೆ ನಡೆಸಲಾಯಿತು. ಹಲಗೂರು ಪಂಚಮಸಾಲಿ ಪೀಠದ ಡಾ.ಮಹಾದೇವ ಸ್ವಾಮೀಜಿ, ಶಾಸಕರಾದ ಅಮರೇಗೌಡ ಬಯ್ಯಪುರ, ಪರಣ್ಣ ಮುನವಳ್ಳಿ, ರಾಘವೇಂದ್ರ ಹಿಟ್ನಾಳ್, ಬಸವರಾಜ ದಢೇಸುಗೂರು, ವಿಪ ಸದಸ್ಯೆ ಹೇಮಲತಾ ನಾಯಕ, ನಗರಾಭಿವೃದ್ಧಿ ಪ್ರಾಕಾರ ಅಧ್ಯಕ್ಷ ಮಹಾಂತೇಶ ಪಾಟೀಲ್, ಗ್ರಾಪಂ ಅಧ್ಯಕ್ಷೆ ಕಮಲವ್ವ, ಪ್ರಮುಖರಾದ ಸಿ.ವಿ.ಚಂದ್ರಶೇಖರ್, ಅಮರೇಶ ಕರಡಿ, ನವೀನ್ ಗುಳಗಣ್ಣನವರ, ವೀರೇಶ ಮಹಾಂತಯ್ಯನಮಠ, ಕೆ.ಶರಣಪ್ಪ, ಜಿ.ವೀರಪ್ಪ, ಅಂದಾನಪ್ಪ ಅಗಡಿ, ಎ.ವಿ.ಕಣವಿ, ಬಸಲಿಂಗಪ್ಪ ಭೂತೆ, ಕಳಕನಗೌಡ ಕಲ್ಲೂರು, ಕರಿಯಪ್ಪ ಮೇಟಿ ಇತರರಿದ್ದರು.