ತಾವರಗೇರಾದಲ್ಲಿ ಹಮ್ಮಿಕೊಂಡಿದ್ದ ಕಲಬುರಗಿ ವಿಭಾಗ ಮಟ್ಟದ ವಿದ್ಯಾರ್ಥಿ ಯುವಜನರ ಅಧ್ಯಯನ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು. ಕೊಪ್ಪಳ ವಿವಿ ಕುಲಪತಿ ಬಿ.ಕೆ.ರವಿ, ಪ್ರಮುಖರಾದ ಇಂದೂಧರ ಹೊನ್ನಾಪೂರ, ಸಾವಿತ್ರಿ ಮುಜುಮದಾರ, ಎಚ್.ಎನ್. ಅಣ್ಣಯ್ಯ, ವಿ. ನಾಗರಾಜ, ಡಾ.ರಾಮಚಂದ್ರ, ಡಿ.ನಾಗರಾಜ ಇದ್ದರು.  
ಜಿಲ್ಲೆ

ಯುವಕರ ಚಿಂತನಾ ಲಹರಿ ಬದಲಾಗಲಿ

ಕುರುವತ್ತಿ ಶ್ರೀಕಾಂತಪ್ಪ

ತಾವರಗೇರಾ: ಬುದ್ಧನ ಶಾಂತಿ-ಬಸವಣ್ಣನ ಕಾಯಕ ಮಂತ್ರ ಹಾಗೂ ಅಂಬೇಡ್ಕರ್‌ರವರ ಸಂವಿಧಾನದ ಆಶಯದಂತೆ ಬದುಕು ಕಟ್ಟಿಕೊಳ್ಳಬೇಕು ಎಂದು ಕೊಪ್ಪಳ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ. ರವಿ ಹೇಳಿದರು.

ಪಟ್ಟಣ ಹೊರ ವಲಯದ ಬುದ್ಧ ವಿಹಾರದಲ್ಲಿ ಜಿಲ್ಲಾ ದಲಿತ ಸಂಘರ್ಷ ಸಮಿತಿ, ಮಾನವ ಬಂಧುತ್ವ ವೇದಿಕೆ ಜಂಟಿಯಾಗಿ ಆಯೋಜಿಸಿದ್ದ ಕಲಬುರಗಿ ವಿಭಾಗ ಮಟ್ಟದ ವಿದ್ಯಾರ್ಥಿ ಯುವ ಜನರ ಅಧ್ಯಯನ ಶಿಬಿರದಲ್ಲಿ ಮಾತನಾಡಿದರು. ಹಿಂದುಳಿದ ಆಯೋಗದ ಶಿಫಾರಸು ಮಾಡುವಾಗ ಮೊದಲು ಧ್ವನಿ ಎತ್ತಿದ್ದು ದಲಿತ ಸಂಘರ್ಷ ಸಮಿತಿ ಎಂದು ತಿಳಿಸಿದರು.

ಸಂವಹನ ಸಮಸ್ಯೆ ನಮ್ಮನ್ನು ಕಾಡುತ್ತಿದೆ. ಸಂವಿಧಾನ ತಿರುಳು ತಿಳಿದುಕೊಳ್ಳಬೇಕಾಗಿದೆ. ಮೀಸಲಾತಿ ಅನಿವಾರ್ಯವಾಗಿದೆ. ಭಾರತ ಸಂವಿಧಾನ ಪೀಠಿಕೆ ಪವಿತ್ರವಾದದ್ದು. ಅದನ್ನು ಓದಿ ತಿಳಿದುಕೊಳ್ಳಬೇಕು ಎಂದರು.

ಯುವಕರು ಮೀಸಲಾತಿ ಇತರ ಸೌಲಭ್ಯಗಳನ್ನು ಪಡೆದುಕೊಂಡು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಮುಂದೆ ಬರಬೇಕು. ಸಾಮಾಜಿಕ ನ್ಯಾಯದ ಕನಸು ನನಸಾಗಬೇಕಾದರೆ ಯುವಕರ ಚಿಂತನಾ ಲಹರಿ ಬದಲಾಗಬೇಕಾಗಿದೆ ಎಂದರು.

ಮಾನವ ಬಂಧತ್ವ ವೇದಿಕೆಯ ರಾಜ್ಯ ಸಂಚಾಲಕ ಡಾ.ರಾಮಚಂದ್ರಪ್ಪ ಮಾತನಾಡಿದರು. ಪತ್ರಕರ್ತೆ ಇಂದೂಧರ ಹೊನ್ನಪುರ ಕಾರ್ಯಕ್ರಮ ಉದ್ಘಾಟಿಸಿದರು. ದಲಿತ ಸಂಘರ್ಷ ಸಮಿತಿಯ ವಿ.ನಾಗರಾಜ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಕಲಬುರಗಿಯ ಬುದ್ಧವಿಹಾರದ ಮುಖ್ಯಸ್ಥೆ ನಾಗರತ್ನಾ ಬಂತೇಜಿ ಸಾನ್ನಿಧ್ಯ ವಹಿಸಿದ್ದರು. ದಸಂಸ ಅಧ್ಯಕ್ಷ ಎಚ್.ಎನ್.ಅಣ್ಣಯ್ಯ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ರಮೇಶ ರಾಮಗೊಂಡನಹಳ್ಳಿ, ಈ. ಮುನಿರಾಜು, ಪ್ರಗತಿಪರ ಚಿಂತಕಿ ಸಾವಿತ್ರಿ ಮುಜುಮದಾರ, ಭೀಮಣ್ಣ ಹವಳೆ, ರಾಮಣ್ಣ ಬೇರಗಿ, ಪ್ರಮುಖರಾದ ವಿ.ನಾಗರಾಜ, ಗುರುಪ್ರಸಾದ, ಲಕ್ಷ್ಮೀಪತಿ ಇದ್ದರು. ದಸಂಸ ತಾಲೂಕು ಸಂಯೋಜಕ ಡಿ.ನಾಗರಾಜ ಸ್ವಾಗತಿಸಿದರು.