ಜಿಲ್ಲೆ

ಸಕಾಲ ಅರ್ಜಿ ವಿಲೇವಾರಿ ವಿಳಂಬ ಸಲ್ಲ: ಅಧಿಕಾರಿಗಳಿಗೆ ಡಿಸಿ ಸುಂದರೇಶ ಬಾಬು ಸೂಚನೆ

ಕೊಪ್ಪಳ: ಸಕಾಲ ಯೋಜನೆಯಡಿ ನಿಗದಿತ ಅವಧಿಯೊಳಗೆ ಅರ್ಜಿ ವಿಲೇವಾರಿ ಮಾಡಿ. ಅನಗತ್ಯ ವಿಳಂಬ ಮಾಡಿದಲ್ಲಿ ಸಂಬಂಧಿಸಿದ ಅಧಿಕಾರಿಯಿಂದ ದಂಡ ವಸೂಲಿ ಮಾಡುವುದಾಗಿ ಡಿಸಿ ಎಂ.ಸುಂದರೇಶ ಬಾಬು ಎಚ್ಚರಿಕೆ ನೀಡಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಕಾಲ ಹಾಗೂ ಐಪಿಜಿಆರ್‌ಎಸ್ ಯೋಜನೆಗಳ ಸಮರ್ಪಕ ಅನುಷ್ಠಾನ ಹಾಗೂ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಕಾಲದಡಿ 45 ವಿವಿಧ ಸೇವೆಗಳನ್ನು ಒದಗಿಸಲಾಗುತ್ತಿದೆ. ಪ್ರತಿ ಅರ್ಜಿ ವಿಲೇವಾರಿಗೆ ನಿರ್ದಿಷ್ಟ ಕಾಲಮಿತಿ ಇದೆ. ಆದರೂ, ಕೆಲ ಅರ್ಜಿ ವಿಲೇವಾರಿಗೆ ಕೊನೆಯ ದಿನದವರೆಗೆ ಕಾಯಲಾಗುತ್ತಿದೆ. ಇದರಿಂದ ಅರ್ಜಿದಾರರಿಗೆ ಸಮಸ್ಯೆಯಾಗುವ ಜತೆಗೆ ಅಭಿವೃದ್ಧಿಗೂ ಹಿನ್ನಡೆಯಾಗುತ್ತಿದೆ.

ಅರ್ಜಿ ಸಲ್ಲಿಸುವಾಗಲೇ ಸಂಬಂಧಿಸಿದ ದಾಖಲಾತಿ ಕೇಳಿ ಪಡೆಯಿರಿ. ದಾಖಲೆ ಕೊರತೆ ಕಾರಣ ಅರ್ಜಿ ತಿರಸ್ಕರಿಸಬೇಡಿ. ಸಕಾಲ ಯೋಜನೆ ಜಾರಿಯಾಗಿ ಹಲವು ವರ್ಷವಾಗಿದ್ದು, ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಅರ್ಜಿ ವಿಲೇವಾರಿಗಾಗಿ ಎಲ್ಲ ಇಲಾಖೆಗಳಲ್ಲಿ ಒಬ್ಬ ಅಧೀನ ಅಧಿಕಾರಿ ಅಥವಾ ಸಿಬ್ಬಂದಿ ನಿಯೋಜಿಸಿ. ಕಂದಾಯ, ಜಿಲ್ಲಾ ಪಂಚಾಯಿತಿ ಅಡಿ ಬರುವ ಎಲ್ಲ ಇಲಾಖೆಗಳು ಅರ್ಜಿಯನ್ನು ಕಡ್ಡಾಯವಾಗಿ ಸ್ವೀಕರಿಸಿ ವಿಲೇವಾರಿ ಮಾಡುವಂತೆ ತಾಕೀತು ಮಾಡಿದರು.

ಬರುವ ತಿಂಗಳು ಸಕಾಲ ಹಾಗೂ ಐಜಿಪಿಆರ್‌ಎಸ್ ಕುರಿತು ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು. ಅಷ್ಟರೊಳಗೆ ಸಕಾಲ ನಿರ್ವಹಣೆಗೆ ಎಲ್ಲ ಇಲಾಖೆಗಳು ಸಿಬ್ಬಂದಿ ನಿಯೋಜಿಸುವಂತೆ ತಿಳಿಸಿದರು. ವಿವಿಧ ಇಲಾಖೆ ಅಧಿಕಾರಿಗಳಿದ್ದರು.