ಗವಿಮಠ ಕೆರೆಯಲ್ಲಿ ಗುರುವಾರ ನಡೆದ ತೆಪ್ಪೋತ್ಸವ ನೋಡುಗರ ಗಮನ ಸೆಳೆಯಿತು. 
ಜಿಲ್ಲೆ

ಶ್ರೀ ಗವಿಸಿದ್ಧೇಶ್ವರ ತೆಪ್ಪೋತ್ಸವ ಸಂಪನ್ನ: ಇದೇ ಮೊದಲ ಬಾರಿಗೆ ಗಂಗಾರತಿ ಅರ್ಪಣೆ

ಕೊಪ್ಪಳ: ಗವಿಮಠ ಅಂಗಳದ ಕೆರೆಯಲ್ಲಿ ಎರಡು ವರ್ಷದ ಬಳಿಕ ಗವಿಸಿದ್ಧೇಶ್ವರ ಸ್ವಾಮಿ ತೆಪ್ಪೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಪ್ರಥಮ ಬಾರಿಗೆ ಗಂಗಾರತಿ ಮಾಡಿದ್ದು, ಈ ವರ್ಷದ ವಿಶೇಷತೆ.

ಎರಡು ತೆಪ್ಪಗಳ ನಡುವೆ ಹಲಗೆಯಿಂದ ನಿರ್ಮಿಸಲಾದ ವೇದಿಕೆಯಲ್ಲಿ ಗವಿಸಿದ್ಧೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಮಂಗಳವಾದ್ಯಗಳೊಂದಿಗೆ ಕರೆ ತರಲಾಯಿತು. ಬಾಳೆ, ಕಬ್ಬು, ಮಾವಿನ ತಳಿರು ತೋರಣ ಹಾಗೂ ಹೂವಿನಿಂದ ಅಲಂಕೃತಗೊಂಡ ಪಲ್ಲಕ್ಕಿಯಲ್ಲಿ ಗವಿಸಿದ್ಧೇಶ್ವರ ಮೂರ್ತಿ ಇರಿಸಲಾಯಿತು. ಪ್ರತಿ ವರ್ಷ ತೆಪ್ಪೋತ್ಸವಕ್ಕೆ ಹಿರಿಯ ಜೀವಗಳು ಚಾಲನೆ ನೀಡುವುದು ವಿಶೇಷ. ಈ ವರ್ಷ ಬಸಮ್ಮ ಮಡಿವಾಳಯ್ಯ ಭೂಸನೂರ ಮಠ, ಅಕ್ಕಮಹಾದೇವಮ್ಮ ಮುದಗಲ್ ಚಾಲನೆ ನೀಡಿದರು.

ಜಾತ್ರೋತ್ಸವದಲ್ಲಿ ಅತ್ಯಂತ ಕಣ್ಮನ ಸೆಳೆಯುವ ಕಾರ್ಯಕ್ರಮ ತೆಪ್ಪೋತ್ಸವ. ತೆಪ್ಪೋತ್ಸವದಲ್ಲಿ ಮಹಾಮಹಿಮ ಗವಿಸಿದ್ಧೇಶನ ದರ್ಶನ ಮಾಡಿದ್ದಲ್ಲಿ ಇಷ್ಟಾರ್ಥ ಸಿದ್ಧಿಸಲಿದೆ ಎಂಬ ನಂಬಿಕೆ ಭಕ್ತರಲ್ಲಿದೆ. ಅದರಲ್ಲೂ ಕೋವಿಡ್ ಕಾರಣದಿಂದ ಕಳೆದೆರಡು ವರ್ಷ ತೆಪ್ಪೋತ್ಸವ ನಡೆದಿರಲಿಲ್ಲ. ಹೀಗಾಗಿ ಈ ವರ್ಷ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಉತ್ಸವ ಕಣ್ತುಂಬಿಕೊಂಡರು.

ಕಾರ್ಯಕ್ರಮದಲ್ಲಿ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕು ತವಡೂರದ ಕರುಣಂ ಕೊಟ್ರಪ್ಪ ರಚಿಸಿದ ಕೊಪ್ಪಳ ಮಹಾತ್ಮ ಶ್ರೀ ಗವಿಸಿದ್ಧೇಶ್ವರ ಸ್ವಾಮಿ ಚರಿತ್ರೆ ಗ್ರಂಥ ಮತ್ತು ಮುನಿರಾಬಾದಿನ ನಿವೃತ್ತ ಇಂಜಿನಿಯರ್ ಕೆ.ಎಂ.ಬಸವರಾಜ್ ಅವರ ಆಡಿಯೋ ಬಿಡುಗಡೆಗೊಳಿಸಲಾಯಿತು. ಧಾರವಾಡದ ಖ್ಯಾತ ಗಾಯಕ ಪಂ.ಬಾಲಚಂದ್ರ ನಾಕೋಡ ಹಾಗೂ ಸಂಗಡಿಗರು ಸುಮಧುರ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ನಂತರ ಬಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಯಿತು.