ಕೊಪ್ಪಳ: ಸಿದ್ದರಾಮೋತ್ಸವದಿಂದ ಬಿಜೆಪಿಗೆ ತೊಂದರೆ ಇಲ್ಲ. ಯಾವ ಉತ್ಸವ ಮಾಡಿದರೂ ಅವರ ಪಕ್ಷಕ್ಕಷ್ಟೇ ಸೀಮಿತ. ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ಆಗಮಿಸಿರುವುದು ನಮಗೆ ಖುಷಿ ತಂದಿದೆ. ಯಾಕೆಂದರೆ ಅವರು ಹೋದಲ್ಲೆಲ್ಲ ಕಾಂಗ್ರೆಸ್ ಸೋತಿದೆ ಎಂದು ಸಚಿವ ಸಿ.ಸಿ.ಪಾಟೀಲ್ ಲೇವಡಿ ಮಾಡಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಕಾರ್ಯಕರ್ತನ ಹತ್ಯೆಯಿಂದ ಜನೋತ್ಸವ ಕಾರ್ಯಕ್ರಮದ ರದ್ದಾಗಿದೆ. ಮುಂದೆ ಆಯಾ ಜಿಲ್ಲಾ ಮಟ್ಟದಲ್ಲಿ ಮಾಡುವ ಯೋಜನೆಯಿದೆ. ಕಾಂಗ್ರೆಸ್ ಅಸ್ತಿತ್ವ ಕಳೆದುಕೊಂಡಿದೆ. ಹೀಗಾಗಿ ಉತ್ಸವ ಮಾಡಿ ಮೇಲೆ ಬರಲು ನೋಡುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಖಚಿತ.
ನನ್ನ ಇಲಾಖೆಯಲ್ಲಿ ಯಾವುದೇ ಭ್ರಷ್ಟಾಚಾರ ಆರೋಪಗಳಿಲ್ಲ. ಈವರೆಗೂ ಯಾವೊಬ್ಬ ಗುತ್ತಿಗೆದಾರಗೆ ಅನ್ಯಾಯವಾದ ಬಗ್ಗೆ ಆರೋಪಿಸಿಲ್ಲ. ಯಾರಿಗೂ ತಾರತಮ್ಯ ಮಾಡಿಲ್ಲ. ಮೆರಿಟ್ ಆಧಾರದಲ್ಲಿ ಗುತ್ತಿಗೆ ನೀಡುತ್ತಿದ್ದೇವೆ. ಅಕ್ರಮ ಕಂಡುಬಂದಲ್ಲಿ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಬಜೆಟ್ ಹೊರತುಡಪಸಿ ಸಿಎಂ ಲೋಕೋಪಯೋಗಿ ಇಲಾಖೆಗೆ 5 ಸಾವಿರ ಕೋಟಿ ರೂ. ಹೆಚ್ಚುವರಿ ಅನುದಾನ ನೀಡಿದ್ದಾರೆ ಎಂದು ತಿಳಿಸಿದರು.
ಅಂಜನಾದ್ರಿಗೆ ತೆರಳಲು ರಿಂಗ್ ರೋಡ್ ನಿರ್ಮಾಣಕ್ಕೆ 400 ಕೋಟಿ ರೂ.ಕ್ರಿಯಾ ಯೋಜನೆ ಸಿದ್ಧಪಡಿಸಲು ಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ರಸ್ತೆ ಕಾಮಗಾರಿಗೆ 130 ಕೋಟಿ ರೂ.ಬಿಡುಗಡೆಗೆ ಆದೇಶಿಸಲಾಗಿದೆ. ಮಡಿಕೇರಿ, ಮಂಗಳೂರು, ಉಡುಪಿ ಜಿಲ್ಲೆಗಳಲ್ಲಿ ಬೆಟ್ಟ-ಗುಡ್ಡಗಳು ಕುಸಿದು ಹಾನಿಯಾಗಿದೆ. ತಕ್ಷಣ ಅನುದಾನ ಬಿಡುಗಡೆ ಮಾಡಿ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿದೆ. ಶಿರಾಡಿ ಘಾಟ್‌ನಲ್ಲಿ ಏಕಮುಖ ಸಂಚಾರ ವ್ಯವಸ್ಥೆ, ಪರ್ಯಾಯ ಬೈಪಾಸ್ ರಸ್ತೆ ನಿರ್ಮಿಸಲಾಗಿದೆ ಎಂದರು.