ರಜತ ಮಹೋತ್ಸವ ಮೆರವಣಿಗೆಯಲ್ಲಿ ಜನಮನ ಸೆಳೆದ ಮುದ್ದಾದ ಮೋಜಿನ ಗೊಂಬೆಗಳು.  
ಜಿಲ್ಲೆ

ಕವನಗಳ ಸಂಖ್ಯೆಗಿಂತ ಸತ್ವ ಮುಖ್ಯ

ತಿರುಳ್ಗನ್ನಡನಾಡು ವೇದಿಕೆ, ಕೊಪ್ಪಳ: ಕವಿತೆಗಳ ಸಂಖ್ಯೆ ಮುಖ್ಯವಲ್ಲ, ಅವುಗಳಲ್ಲಿರುವ ಸತ್ವ ಮುಖ್ಯವಾಗಿರುತ್ತದೆ ಎಂದು ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.

ನಗರದ ಸಾಹಿತ್ಯ ಭವನದಲ್ಲಿ ಕೊಪ್ಪಳ ರಜತ ಮಹೋತ್ಸವದ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕನ್ನಡ ಕಾವ್ಯ ನೃಪತುಂಗನಿಂದ ಪಂಪನವರೆಗೆ ಇತಿಹಾಸ ಸೃಷ್ಟಿಸಿದೆ. ಕವಿಗಳು ಸಮಾಜದ ಸಮಾನತೆ, ಭ್ರಾತೃತ್ವ, ವೈಜ್ಞಾನಿಕತೆ ಹಾಗೂ ವೈಚಾರಿಕತೆ ಉಳಿಸಿ ಬೆಳೆಸಿಕೊಂಡು ಗಟ್ಟಿತನದ ಕವನ ರಚಿಸಬೇಕು. ಸಂವಿಧಾನ ಏನು ಹೇಳಿದೆ ಎಂದು ತಿಳಿದು ಪರಿಪಾಲಿಸಬೇಕು. ಜಿಲ್ಲೆಯಾಗಿ 25 ವರ್ಷವಾಗಿದ್ದು, ರಜತ ಮಹೋತ್ಸವ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ನಿಜಾಮನ ಕಾಲದಲ್ಲಿಯೇ ಕೊಪ್ಪಳ ಜಿಲ್ಲಾ ಕೇಂದ್ರವಾಗಿತ್ತು. ಬಳಿಕ ರಾಯಚೂರು ಜಿಲ್ಲೆಗೆ ಸೇರ್ಪಡೆಯಾಯಿತು. ಪ್ರತ್ಯೇಕ ಜಿಲ್ಲೆಗಾಗಿ 80 ದಿನಗಳ ಹೋರಾಟ ನಡೆಯಿತು. ಒಗ್ಗಟ್ಟಿನ ಬಲಕ್ಕೆ ಜಯ ಸಿಕ್ಕು ಜಿಲ್ಲೆ ರಚನೆಯಾಯಿತು ಎಂದರು.

ಪ್ರಾಚಾರ್ಯ ಡಾ.ಶರಣಬಸಪ್ಪ ಕೋಲ್ಕಾರ್ ಮಾತನಾಡಿ, ಕವಿಯ ಕವಿತೆ ಜನರ ಮನಸ್ಸಿಗೆ ಮುಟ್ಟಬೇಕು. ಧಾರ್ಮಿಕ ಸಂರ್ಘಷ ಹುಟ್ಟು ಹಾಕುವ ಕವಿತೆ ಇರಬಾರದು. ಜಿಲ್ಲೆಯ ಇತಿಹಾಸದ ಶಾಸನಗಳನ್ನು ನೋಡುತ್ತ ಹೋದರೆ ಸಾಕಷ್ಟು ದೊರೆಯುತ್ತವೆ. ಕುಕನೂರು ತಾಲೂಕಿನ ದ್ಯಾಂಪುರ ಗ್ರಾಮದ ಸಿದ್ದಯ್ಯ ಪುರಾಣಿಕ, ಕಲ್ಲಿನಾಥ ಸ್ವಾಮಿ ಕವಿಗಳು ಈ ಭಾಗದ ಹೆಸರಾಂತ ಸಾಹಿತಿಗಳಾಗಿದ್ದಾರೆ ಎಂದರು.

ಕವಿಗಳಾದ ಶ್ರೀನಿವಾಸ ಚಿತ್ರಗಾರ ಅವರ ‘ಹೆಸರಾಗಿದೆ ಕೊಪ್ಪಳ ಮಾಡಬೇಕಾಗಿದೆ ಸಪ್ಪಳ’, ಲಿಂಗಾರೆಡ್ಡಿ ಆಲೂರು ಅವರ ‘ಬೆಂಕಿ ಇಟ್ಟವರ‌್ಯಾರೋ ಈ ಹೊಲಕ’ ಹಾಗೂ ಇತ್ತೀಚೆಗೆ ಅಪಘಾತದಲ್ಲಿ ಮೃತಪಟ್ಟ ಸಿಪಿಐ ರವಿ ಉಕ್ಕುಂದ ಅವರ ಕುರಿತು ಕವಿ ನಟರಾಜ ಸೋನಾರ್ ವಾಚಿಸಿದ ಕವನ ನೆರೆದವರ ಕಣ್ಣಂಚಿನಲ್ಲಿ ನೀರು ತರಿಸಿತು. ಕೆ.ಬಿ.ಬ್ಯಾಳಿ, ಅಲ್ಲಾವುದ್ದಿನ್ ಎಮ್ಮಿ, ರಾಘವೇಂದ್ರ ದಂಡಿನ, ಅಕ್ಬರ್ ಕಾಲಿಮಿರ್ಚಿ, ಸಿದ್ದಲಿಂಗಪ್ಪ ಕೊಟ್ನೆಕಲ್ ಸೇರಿ 38 ಕವಿಗಳು ಕವನ ವಾಚಿಸಿದರು.

ಕಷ್ಟಗಳನ್ನು ಮೆಟ್ಟಿ ನಿಲ್ಲಬೇಕು ಹೆಣ್ಣು: ಕೊಪ್ಪಳ: ಹೆಣ್ಣು ಒಂದು ಜಗದ ಕಣ್ಣು, ಅವಳು ಅಬಲೆ ಅಲ್ಲ, ಸಬಲೆ ಎಂದು ನಗರಸಭೆ ಅಧ್ಯಕ್ಷೆ ಶಿವಗಂಗಾ ಶಿವರಡ್ಡಿ ಭೂಮಕ್ಕನವರ ಹೇಳಿದರು.

ಕೊಪ್ಪಳ ರಜತ ಮಹೋತ್ಸವ ನಿಮಿತ್ತ ಸಾಹಿತ್ಯ ಭವನದಲ್ಲಿ ಏರ್ಪಡಿಸಿದ್ದ ಮಹಿಳಾ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ಹೆಣ್ಣಿಗೆ ನದಿಯ ಹೆಸರುಗಳಿವೆ. ನದಿ ಎಲ್ಲೋ ಹುಟ್ಟಿ ಎಲ್ಲೋ ಹರಿದು ಕೊನೆಗೆ ಸಮುದ್ರ ಸೇರುತ್ತದೆ. ಈ ನಡುವೆ ಕಲ್ಲು, ಬಂಡೆ, ಮುಳ್ಳುಗಳು ಎದುರಾದರೂ ನದಿ ನೀರು ನಿಲ್ಲದೆ ಮುನ್ನುಗ್ಗುತ್ತದೆ. ಅದೇ ರೀತಿ ಹೆಣ್ಣು ಕೂಡ ಕಷ್ಟಗಳನ್ನು ಮೆಟ್ಟಿ ನಿಲ್ಲಬೇಕು ಎಂದು ಸಲಹೆ ನೀಡಿದರು. ಡಾ.ಸೋಮಕ್ಕ ಆಶಯ ನುಡಿಗಳನ್ನು ಆಡಿದರು. ಸಾಹಿತಿ ಸಾವಿತ್ರಿ ಮುಜುಮ್‌ದಾರ ಅಧ್ಯಕ್ಷತೆ ವಹಿಸಿದ್ದರು. ಕೈಗಾರಿಕೆ ಮತ್ತು ಕೃಷಿ ಅಭಿವೃದ್ಧಿ ಕುರಿತು ಡಾ.ಶಿಲ್ಪಾ ದಿವಟರ್, ಕೊಪ್ಪಳ ಜಿಲ್ಲೆಯ ಐತಿಹಾಸಿಕ ನೋಟದ ಬಗ್ಗೆ ಡಾ.ಗೀತಾ ಪಾಟೀಲ್, ಜನಾರೋಗ್ಯ ಕುರಿತು ಡಾ.ಪಾರ್ವತಿ ಪಿ.ಎಂ.ಮಾತನಾಡಿದರು.

ಸಾಂಸ್ಕೃತಿಕ ಕಾರ್ಯಕ್ರಮ: ಕೊಪ್ಪಳ ರಜತ ಮಹೋತ್ಸವದಲ್ಲಿ ಪರಶುರಾಮ್ ಬಣ್ಣದ ಅವರು ಸುಂಗಮ ಸಂಗೀತ, ಗಂಗಾವತಿಯ ವಾರೂಣಿ ಆರ್.ನವಲಿ ಭರತ ನಾಟ್ಯ ಕಣ್ಮನ ಸೆಳೆಯಿತು. ನಿಂಗಾಪುರದ ಹೇಮಂತ ಅವರ ಏಕಪಾತ್ರಾಭಿನಯ ಅಮೋಘವಾಗಿತ್ತು. ತತ್ವ ಪದಗಳು, ಜಾನಪದ ಸಂಗೀತ ಜನರ ತಲೆದೂಗುವಂತೆ ಮಾಡಿದವು.

=========