ಕೊಪ್ಪಳ: ಗ್ರಾಹಕರು ತಮ್ಮ ಹಕ್ಕುಗಳೊಂದಿಗೆ ಕರ್ತವ್ಯವನ್ನು ಅರಿಯಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎ.ಜಿ.ಮಾಲ್ದರ್ ಹೇಳಿದರು.
ನಗರದ ಮೌಲಾನ ಅಜಾದ್ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಸ್ತು ಕೊಂಡುಕೊಳ್ಳುವ, ಮಾರಾಟ ಮಾಡುವವರೆಲ್ಲರೂ ಗ್ರಾಹಕರು. ಕೊಳ್ಳುವ ಮುನ್ನ ನಮ್ಮ ಕರ್ತವ್ಯ ಪಾಲಿಸೋಣ. ವಸ್ತುವಿನ ಗುಣಮಟ್ಟ, ದರ, ಕಾನೂನು ಜ್ಞಾನ ಹೊಂದಬೇಕು. ‘ಗ್ರಾಹಕ ಆಯೋಗದಲ್ಲಿ ಪ್ರಕರಣಗಳ ಪರಿಣಾಮಕಾರಿ ವಿಲೇವಾರಿ’ ಎಂಬುವುದು ಈ ವರ್ಷದ ಘೋಷ ವಾಕ್ಯ. ನಿತ್ಯದ ವ್ಯವಹಾರಗಳಲ್ಲಿ ವಂಚನೆೆ ಹಾಗೂ ಶೋಷಣೆಗೆ ಒಳಗಾಗುವ ಗ್ರಾಹಕರು, ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿ, ಪರಿಹಾರ ಪಡೆಯಬಹುದು. ಮೊಬೈಲ್, ಟಿವಿ ಇನ್ನಾವುದೇ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಯಲ್ಲಿ ಅನ್ಯಾಯವಾದರೆ ಎರಡು ವರ್ಷಗಳ ಅವಧಿಯೊಳಗೆ ಅಥವಾ ವಸ್ತುಗಳ ಖರೀದಿಯ ವ್ಯಾಲಿಡಿಟಿ ಒಳಗಡೆ ಅಗತ್ಯ ದಾಖಲೆಗಳೊಂದಿಗೆ ಆಯೋಗದಲ್ಲಿ ಬಗೆಹರಿಸಿಕೊಳ್ಳಬಹುದು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ದೇವೇಂದ್ರ ಪಂಡಿತ್ ಮಾತನಾಡಿ, ಸಾರ್ವಜನಿಕ ಬದುಕಿನಲ್ಲಿ ಎಲ್ಲರೂ ಗ್ರಾಹಕರೇ. ಹೀಗಾಗಿ ಗ್ರಾಹಕರ ಕಾಯ್ದೆ ಬಗ್ಗೆ ಎಲ್ಲರೂ ಅರಿಯಬೇಕು. ಅಂಗಡಿಕಾರರು ನಿಗದಿತ ಬೆಲೆಗಿಂತ ಅಧಿಕ ದರಕ್ಕೆ ವಸ್ತು ಮಾರಾಟ ಮಾಡುವುದು, ಸೇವೆಯಲ್ಲಿ ನೂನ್ಯತೆ ಕಂಡುಬಂದಲ್ಲಿ ದೂರು ದಾಖಲಿಸಬಹುದೆಂದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯ ಗಿರೀಶಗೌಡ ಪಾಟೀಲ್ ವಿಶೇಷ ಉಪನ್ಯಾಸ ನೀಡಿದರು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸುರೇಶ್ ಕೊಕರೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಸದಸ್ಯೆ ಜಿ.ಎಸ್.ಸೌಭಾಗ್ಯಲಕ್ಷ್ಮೀ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿ ರಾಜೆೇಂದ್ರ ಗಡಾದ, ಆಹಾರ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ, ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿ ಬದಿಯುದ್ದೀನ್ ನವೀದ್ ಇತರರಿದ್ದರು.