ಕರಿಯಣ್ಣ ಸಂಗಟಿ, ವಿಧಾನ ಪರಿಷತ್ ಮಾಜಿ ಸದಸ್ಯ. 
ಜಿಲ್ಲೆ

ಕೆರೆ ತುಂಬಿಸುವ ಯೋಜನೆಯಲ್ಲಿ ಅಕ್ರಮ- ಮಾಜಿ ಎಂಎಲ್ಸಿ ಕರಿಯಣ್ಣ ಸಂಗಟಿ ಆರೋಪ

ಕೊಪ್ಪಳ: ಗಂಗಾವತಿ ತಾಲೂಕಿನ ಮುಕ್ಕುಂಪಿ ಮತ್ತು ಇತರ ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ನಿಯಮದಂತೆ ಅನುಷ್ಠಾನವಾಗುತ್ತಿಲ್ಲ. ಈ ಬಗ್ಗೆ ನೀರಾವರಿ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ತಕ್ಷಣ ಕ್ರಮ ಜರುಗಿಸದಿದ್ದಲ್ಲಿ ಸಿಐಡಿಗೆ ದೂರು ನೀಡಲಾಗುವುದೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಕರಿಯಣ್ಣ ಸಂಗಟಿ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾಮಗಾರಿ ಟೆಂಡರ್ ನೀಡುವಾಗಲೇ ನಿಯಮಾವಳಿ ಗಾಳಿಗೆ ತೂರಲಾಗಿದೆ. ಅರ್ಹತೆ ಇಲ್ಲದಿದ್ದರೂ ವೀರಯ್ಯ ಹಿರೇಮಠ ಎಂಬುವರಿಗೆ 117 ಕೋಟಿ ರೂ. ಟೆಂಡರ್ ನೀಡಲಾಗಿದೆ. ಕೆಪಿಟಿಟಿ ನಿಯಮದಂತೆ ವರ್ಕಡನ್ ನೀಡಿಲ್ಲ. ಪೈಪ್‌ಲೈನ್ ಕಾಮಗಾರಿಗೆ ಬಳಿಸಿದ ಪೈಪ್‌ಗಳು ಯೋಜನೆಯಲ್ಲಿ ಶಿಫಾರಸು ಮಾಡಿದ ಗುಣಮಟ್ಟ ಹೊಂದಿಲ್ಲ. ಕಾಮಗಾರಿ ಪರಿಶೀಲನೆ ವೇಳೆ ತೋರಿಸಿದ ಪೈಪ್‌ಗಳು ಬೇರೆಯಾಗಿದ್ದು, ವಾಸ್ತವವಾಗಿ ಅಳವಡಿಸಿದ ಪೈಪ್ ಬೇರೆಯಾಗಿವೆ. ಯೋಜನೆಯಂತೆ ಕಾಮಗಾರಿ ನಡೆಸದೆ, ಗುತ್ತಿಗೆದಾರರು ಅನುಕೂಲಕ್ಕೆ ತಕ್ಕಂತೆ ಡಿಸೈನ್ ಬದಲಾವಣೆ ಮಾಡಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದರೂ ಶಾಸಕ ಪರಣ್ಣ ಮುನವಳ್ಳಿ ಅನುಮತಿ ಪಡೆದಿರುವೆ ಎಂದು ಸಬೂಬು ಹೇಳುತ್ತಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಬಗ್ಗೆ ಚಕಾರ ಎತ್ತುತ್ತಿಲ್ಲವೆಂದು ಆರೋಪಿಸಿದರು.

ತಕ್ಷಣ ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿ ವೀಕ್ಷಿಸಬೇಕು. ಯೋಜನೆಯಂತೆ ಕಾಮಗಾರಿ ನಡೆಸುವಂತೆ ಗುತ್ತಿಗೆದಾರರಿಗೆ ಸೂಚಿಸಬೇಕು. ಈಗಾಗಲೇ 50 ಕೋಟಿ ರೂ. ಬಿಲ್ ಮಾಡಿದ್ದು, ಬಾಕಿ ಬಿಲ್ ಮಾಡಬಾರದು. ಇಲ್ಲದಿದ್ದಲ್ಲಿ ಸರ್ಕಾರಕ್ಕೆ ಹಾಗೂ ಸಿಐಡಿ ಸಂಸ್ಥೆಗೆ ನಾವೇ ನೇರವಾಗಿ ದೂರು ಹಾಗೂ ಅಗತ್ಯ ದಾಖಲೆಗಳನ್ನು ಸಲ್ಲಿಸುತ್ತೇವೆ ಎಂದು ತಿಳಿಸಿದರು. ಜಿಪಂ ಮಾಜಿ ಸದಸ್ಯ ಅಮರೇಶ ಹೊಸಮನಿ ಇದ್ದರು.