ಕಾರಟಗಿ: ಇತಿಹಾಸದ ಪುಟಗಳಲ್ಲಿ ಗಂಡುಗಲಿ ಕುಮಾರರಾಮ ಸ್ಪಷ್ಟವಾಗಿ ದಾಖಲಾಗದೇ ಉಳಿದಿದ್ದರೂ ಜನರ ಮನಸ್ಸಲ್ಲಿ ಅವನೊಬ್ಬ ಸರದಾರನಾಗಿ ಇಂದಿಗೂ ಉಳಿದಿದ್ದಾನೆ ಎಂದು ಕೊಲ್ಲಿ ನಾಗೇಶ್ವರರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸ್ನಾತಕೋತ್ತರ ಕೇಂದ್ರದ ಸಂಯೋಜಕ ಡಾ.ಜಾಜಿ ದೇವೇಂದ್ರಪ್ಪ ಅಭಿಪ್ರಾಯಪಟ್ಟರು.
ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಭಾನುವಾರ ಏರ್ಪಡಿಸಿದ್ದ ಗಂಡುಗಲಿ ಕುಮಾರರಾಮನ ಜಯಂತ್ಯುತ್ಸವದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಗಂಡುಗಲಿ ಕುಮಾರರಾಮ ಬುಡಕಟ್ಟು ರಾಜ ಎನ್ನುವ ಕಾರಣಕ್ಕೆ ಚರಿತ್ರೆಯಲ್ಲಿ ಸರಿಯಾಗಿ ದಾಖಲಿಸಿಲ್ಲ. ಜಾತಿ ಮತ್ತು ವರ್ಗದ ನೆಲೆಯೇ ಅದಕ್ಕೆ ಮೂಲ ಕಾರಣ. ಭಾರತದಲ್ಲಿ ಯಾವ ರಾಜನಿಗೂ ದೊರೆಯದ ಜನಸಾಮಾನ್ಯರ ಮನ್ನಣೆ ಕುಮಾರರಾಮನಿಗೆ ದೊರೆತಿದೆ. ಆತನ ಕುರಿತು ನಂಜುಡ ಕವಿ ಕುಮಾರರಾಮ ಚರಿತೆ, ಪಾಂಚಾಳ ಗಂಗನ ಹಳೇ ಕುಮಾರರಾಮನ ಸಾಂಗತ್ಯ, ಮಹಾದೇವ ಕವಿಯ ಬಾಲರಾಮ ಸಾಂಗತ್ಯ, ಅಜ್ಞಾತ ಕವಿಯ ಹೊಸ ಕುಮಾರರಾಮನ ಸಾಂಗತ್ಯ ಎನ್ನುವ ನಾಲ್ಕು ಮಾಹಾಕಾವ್ಯಗಳು ಜನಜನಿತ. ಇಡೀ ಕರ್ನಾಟಕದಾದ್ಯಂತ ಕುಮಾರರಾಮನ ಕುರಿತು ಜನಪದ ಹಾಡು, ಲಾವಣಿ, ಮೌಕಿಕ ಕಾವ್ಯಗಳು ಜೀವಂತವಾಗಿವೆ. ಅಷ್ಟೇ ಅಲ್ಲದೇ, ಶಿವಮೊಗ್ಗ, ಚಾಮರಾಜನಗರ, ಬಳ್ಳಾರಿ, ಕೊಪ್ಪಳ ಜಿಲ್ಲೆಗಳಲ್ಲಿ ಆತನ ಸಾಕಷ್ಟು ದೇವಾಲಯಗಳಿದ್ದು ಇಂದಿಗೂ ಜಾತ್ರೆಗಳು ವಿಜೃಂಭಣೆಯಿಂದ ನಡೆಯುತ್ತಿವೆ. ತೆಲುಗು ಮತ್ತು ತಮಿಳು ಭಾಷೆಯಲ್ಲಿ ಕುಮಾರರಾಮನ ಮೇಲೆ ಹಾಡುಗಳಿವೆ. ಬಳ್ಳಾರಿ ಜಿಲ್ಲೆ ಸಂಡೂರಿನಲ್ಲಿ ಕುಮಾರರಾಮನ ನೆನಪಿಗಾಗಿ ಮೊಹರಂ ಹಬ್ಬದ ವೇಳೆ ಮಸೀದಿಯಲ್ಲಿ ಪೀರಲ ದೇವರನ್ನು ಸ್ಥಾಪಿಸಲಾಗುತ್ತದೆ. ದೆಹಲಿ ಸುಲ್ತಾನರನ್ನು ಹಿಮ್ಮೆಟ್ಟಿಸಿದ ಮೊದಲ ರಾಜನೆಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಗಂಗಾವತಿಯ ಮುಕ್ಕುಂಪಿಯಿಂದ ಕೊಪ್ಪಳದ ಬೂದಗುಂಪಾವರೆಗೆ ನೆಲಗಂಭಗಳನ್ನು ನೆಡುವ ಮೂಲಕ ವೈರಿಗಳ ಆಕ್ರಮಣಕ್ಕೆ ದೇಸಿಯ ಯುದ್ಧ ನೀತಿ ಬಳಸುತ್ತಿದ್ದ ಎಂದು ತಿಳಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗಂಡುಗಲಿ ಕುಮಾರರಾಮನ ಕುರಿತು ಕವಿಗೋಷ್ಠಿಯಲ್ಲಿ 30 ಕವಿಗಳು ಕವಿತೆ ವಾಚಿಸಿದರು. ಜಯಂತಿ ಅಂಗವಾಗಿ ತಾಲೂಕಿನ ಎಲ್ಲಾ ಶಾಲೆ-ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಹಾಗೂ ಭಾಷಣ ಸ್ಪರ್ಧೆ ಏರ್ಪಡಿಸಿದ್ದು ವಿಜೇತರಿಗೆ ಬಹುಮಾನ ವಿತರಿಸಿದರು.
ಕಸಾಪ ಜಿಲ್ಲಾ ಗೌರವಕಾರ್ಯದರ್ಶಿ ಶೇಖರಗೌಡ ಮಾಲಿಪಾಟೀಲ್, ತಾಲೂಕು ಅಧ್ಯಕ್ಷ ಶರಣಪ್ಪ ಕೋಟ್ಯಾಳ, ವಾಲ್ಮೀಕಿ ಮಹಾಸಭಾ ತಾಲೂಕು ಅಧ್ಯಕ್ಷ ಗದ್ದೆಪ್ಪ ನಾಯಕ, ಉಪನ್ಯಾಸಕರಾದ ಡಾ.ಹನುಮಂತಪ್ಪ ಚಂದಲಾಪುರ, ವಿರೂಪಾಕ್ಷಿ ದೇಶನೂರು, ಶಿಕ್ಷಕ ಗಂಗಣ್ಣ ವಂದಾಲಿ ಇದ್ದರು.
ಬಳಿಕ ಸಿಂಧನೂರು ತಾಲೂಕಿನ ಚಂದನಹಳ್ಳಿ ಗ್ರಾಮದ ಹಳೇ ವಿದ್ಯಾರ್ಥಿಗಳು ಪ್ರದರ್ಶಿಸಿದ ಮಹಾಭಾರತದ ಭೀಮನ ಮೊಮ್ಮಗ ವೀರ ಬರ್ಭಿರೀಕನ ಕುರಿತ ನಾಟಕ ಜನಮನಸೊರೆಗೊಂಡಿತು.