ಕೊಪ್ಪಳ: ಸರ್ಕಾರ ಬೆನ್ನುಹುರಿ ಅಪಘಾತವುಳ್ಳ ಅಂಗವಿಕರಿಗೆ ಸೌಲಭ್ಯ ಕಲ್ಪಿಸಬೇಕೆಂದು ಡಾ.ವಿಜಯ ಮಹಾಂತೇಶ ಸುಂಕರ್ ಹೇಳಿದರು.
ನಗರದಲ್ಲಿ ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆ ಅಂಗವಾಗಿ ಸಾಮರ್ಥ್ಯ ಸಂಸ್ಥೆ ಹಾಗೂ ಎಪಿಡಿ ಸಂಸ್ಥೆಯಿಂದ ಗುರುವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು. ಬೆನ್ನುಹುರಿ ಅಪಘಾತವುಳ್ಳವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಕೀಯ ಕಿಟ್ ದೊರೆಯುವಂತಾಗಬೇಕು. ತಾಲೂಕು ಮಟ್ಟದಲ್ಲಿ ಅಂಗವಿಕಲರ ಗುರುತಿನ ಚೀಟಿ ವಿತರಿಸಬೇಕು. ಶೇ.5ರ ಅನುದಾನದಲ್ಲಿ ಸ್ವಯಂ ಉದ್ಯೋಗಕ್ಕೆ ಧನ ಸಹಾಯ, ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ, ಶಾಸಕರು ಮತ್ತು ಸಂಸದರ ಅನುದಾನದಲ್ಲಿ ವ್ಹೀಲ್‌ಚೇರ್, ಕ್ಯಾಲಿಪರ್, ವಾಕರ್, ವಾಟರ್ ಬೆಡ್ ಒದಗಿಸಬೇಕು. ವೈದ್ಯಕೀಯ ಚಿಕಿತ್ಸೆ, ಫಿಜಿಯೋಥೆರಪಿ ಇನ್ನಿತರ ಪುನಃಶ್ಚೇತನ ಸೇವೆಗಳಿಗೆ ಅನುದಾನ ಒದಗಿಸಬೇಕು ಎಂದರು.
ನಗರದ ಕೇಂದ್ರ ಬಸ್ ನಿಲ್ದಾಣದಿಂದ ಅಶೋಕ ವೃತ್ತದವರೆಗೆ ಜಾಥಾ ನಡೆಸಲಾಯಿತು. ಬೆನ್ನುಹುರಿ ಅಪಘಾತವುಳ್ಳ ಅಂಗವಿಕಲರು, ಆರೈಕೆದಾರರು, ಕೊಪ್ಪಳ ಇನ್ನರ್‌ವ್ಹೀಲ್ ಕ್ಲಬ್‌ನ ಉಮಾ ತಂಬ್ರಳ್ಳಿ, ಸುಜಾತಾ ಪಟ್ಟಣಶೆಟ್ಟಿ, ಶರಣಮ್ಮ ಪಾಟೀಲ್, ಕೋಮಲಾ ಕುದರಿಮೋತಿ, ಸಾಮರ್ಥ್ಯ ಸಂಸ್ಥೆ ನಿರ್ದೇಶಕ ಬಿ.ಹಂಪಣ್ಣ, ಕಾರ್ಯಕ್ರಮ ವ್ಯವಸ್ಥಾಪಕ ಎಚ್.ಎನ್.ಬಸಪ್ಪ ಇತರರಿದ್ದರು.