ಕೊಪ್ಪಳ: ನಗರದ ಕವಲೂರು ನಗರದಲ್ಲಿನ ದೇವರಾಜ ಅರಸು ಹಿಂದುಳಿದ ವರ್ಗಗಳ ಬಾಲಕಿಯರ ಹಾಸ್ಟೆಲ್‌ನಲ್ಲಿ ಶನಿವಾರ ಬೆಳಗ್ಗೆ ಕುಕ್ಕರ್ ಸ್ಫೋಟಗೊಂಡಿದ್ದು, ಭಾರಿ ಅನಾಹುತ ತಪ್ಪಿದೆ.
ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಇದಾಗಿದ್ದು, ಬೆಳಗ್ಗೆ ಉಪಹಾರ ಸಿದ್ಧಪಡಿಸುವಾಗ ಘಟನೆ ನಡೆದಿದೆ. ಅಡುಗೆ ಸಿಬ್ಬಂದಿ ಶರಣಮ್ಮ ಬೇಳೆ ಸಾರು ಮಾಡಲೆಂದು ಒಲೆ ಮೇಲೆ ಕುಕ್ಕರ್ ಇಟ್ಟಿದ್ದಾರೆ. ವಿಜಿಲ್ ಸಮಸ್ಯೆಯಾಗಿ ಶಬ್ದ ಮಾಡಿಲ್ಲ. ಕುಕ್ಕರ್ ಒಳಗೆ ಒತ್ತಡ ಹೆಚ್ಚಾಗಿ ಏಕಾಏಕಿ ಸ್ಫೋಟಗೊಂಡಿದೆ. ಸಿಡಿದ ತೀವ್ರತೆಗೆ ಶರಣಮ್ಮ ಕಣ್ಣಿಗೆ ಗಾಯಗಳಾಗಿವೆ. ಕೈ ಮುರಿದಿದ್ದು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಇತರರಿಗೆ ಯಾವುದೇ ಅಪಾಯವಾಗಿಲ್ಲ. ಘಟನೆಯಿಂದ ವಿದ್ಯಾರ್ಥಿನಿಯರು ಗಾಬರಿಗೊಂಡಿದ್ದಾರೆ. ಬಳಿಕ ಕೆಳಗಿನ ಅಡುಗೆ ಕೋಣೆಯಲ್ಲಿ ಉಪಹಾರ ತಯಾರಿಸಿ ವಿದ್ಯಾರ್ಥಿಗಳಿಗೆ ಉಣಬಡಿಸಲಾಗಿದೆ. ಸದ್ಯ ಹಾಸ್ಟೆಲ್ನಲ್ಲಿ 50 ವಿದ್ಯಾರ್ಥಿನಿಯರು ವಾಸವಿದ್ದಾರೆ. ವಿಷಯ ತಿಳಿದು ಡಿವೈಎಸ್ಪಿ ಶರಣಬಸಪ್ಪ ಸುಬೇದಾರ್, ಬಿಸಿಎಂ ತಾಲೂಕು ಅಧಿಕಾರಿ ರಮೇಶ ಹುಬ್ಬಳ್ಳಿ ಇತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.