ಜಿಲ್ಲೆ

ಶ್ರೀ ಗವಿಸಿದ್ಧೇಶ್ವರ ಸ್ವಾಮಿ ಶಕ್ತಿ, ಜನರ ಭಕ್ತಿಗೆ ಸೋತಿರುವೆ; ಈಶ ಫೌಂಡೇಷನ್‌ನ ಸದ್ಗುರು ಮೆಚ್ಚುಗೆ

ಕೊಪ್ಪಳ: ಶ್ರೀ ಗವಿಸಿದ್ಧೇಶ್ವರರ ಶಕ್ತಿ, ಜನರ ಭಕ್ತಿಗೆ ಮನ ಸೋತಿದೆ ಎಂದು ಆಧ್ಯಾತ್ಮಿಕ ಚಿಂತಕ, ಈಶ ಫೌಂಡೇಷನ್‌ನ ಸದ್ಗುರು ಮೆಚ್ಚುಗೆ ವ್ಯಕ್ತಪಡಿಸಿದರು.

ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಮಹಾರಥೋತ್ಸವಕ್ಕೆ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿ, ಮಾತನಾಡಿದರು.

ಎಷ್ಟೋ ಸಾಧು, ಸಂತರು ಭೂಮಿಯಲ್ಲಿ ತಮ್ಮ ಕೆಲಸ ಮುಗಿದ ನಂತರ ಕಾಯ ಬಿಟ್ಟು ಹೋಗಿದ್ದಾರೆ. ಆದರೆ, ಗವಿಮಠದ 11ನೇ ಪೀಠಾಧಿಪತಿ ಗವಿಸಿದ್ದೇಶ್ವರ ಸ್ವಾಮೀಜಿ ಜೀವಂತವಿರುವಾಗಲೇ ತಮ್ಮ ಕಾಯವನ್ನು ಬಿಟ್ಟು ಹೋಗಿದ್ದಾರೆ. ಅವರು ಜೀವಂತ ಸಮಾಧಿಯಾದ ದಿನದ ನೆನಪಿಗಾಗಿ ಮಹಾರಥೋತ್ಸವ ಆಚರಿಸುತ್ತಿರುವುದು ಹೆಮ್ಮೆಯ ವಿಚಾರ. ಇದು ನನ್ನ ಹೃದಯ ಗೆದ್ದಿದೆ. ಇದು ದೇಶದ ನಾಗರಿಕತೆ ಮತ್ತು ಸಂಸ್ಕೃತಿ ಬಿಂಬಿಸುತ್ತದೆ. ಇಂದಿನ ಪೀಳಿಗೆಗೆ ದೈವಿ ಶಕ್ತಿಯ ಪ್ರೇರಣೆಯಾಗುತ್ತಿದೆ. ಇಂತಹ ಸಂಸ್ಕೃತಿ ನಮ್ಮಲ್ಲಿ ಮಾತ್ರ ಕಾಣಲು ಸಾಧ್ಯ ಎಂದರು. ಜಾತ್ರೆಯಲ್ಲಿ ಭಕ್ತಿಯ ಸಾಗರವೇ ಹರಿದಿದೆ. ನದಿಯಂತೆ ಭಕ್ತರು ಹರಿದು ಬಂದಿದ್ದಾರೆ. ಇಷ್ಟೊಂದು ಜನರನ್ನು ಎಲ್ಲರೂ ನಿರ್ವಹಣೆ ಮಾಡಲು ಸಾಧ್ಯವಿಲ್ಲ. ದೈವ ಭಕ್ತಿಯೊಂದೆ ನಿರ್ವಹಣೆ ಮಾಡಲು ಸಾಧ್ಯ. ಶಿವನನ್ನು ಹಲವು ರೂಪಗಳಲ್ಲಿ ಕಾಣುತ್ತಿದ್ದೇವೆ. ಅದರಲ್ಲಿ ಸಿದ್ದೇಶ್ವರ, ಯೋಗೇಶ್ವರ ಮೂಲಕವು ಭಕ್ತಿ ವ್ಯಕ್ತವಾಗುತ್ತದೆ. ಯೋಗ ವೈಜ್ಞಾನಿಕವಾದದ್ದು, ಮಾನವ ಸ್ವಭಾವವಾದದ್ದು ಎಂದರು.

15 ಸಾವಿರ ವರ್ಷಗಳ ಹಿಂದಿನ ಶಿವ ಕೇವಲ ಇತಿಹಾಸ ಅಂತ ಬಾವಿಸಬೇಕಿಲ್ಲ, ಭವಿಷ್ಯವು ಹೌದು ಎನ್ನುವುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ಜನ ಒಪ್ಪಿಕೊಳ್ಳಲು ತಯಾರಿದ್ದಾರೆ. ಹೀಗಾಗಿ ಯೋಗವನ್ನು ವೈಜ್ಞಾನಿಕ ಮಾದರಿ ಹಾಗೂ ಶಿಸ್ತು ಬದ್ಧ ಮಾದರಿಯಲ್ಲಿ ಜನರಿಗೆ ಮುಟ್ಟಿಸುವ ಕೆಲಸವಾಗಬೇಕಿದೆ. ಇದೇ ಮೊದಲ ಬಾರಿಗೆ ಮಾನವ ಕುಲ ಎದುರಿಸುವ ಸಮಸ್ಯೆಗಳಿಗೆ ಲಾಜಿಕಲ್ ಪರಿಹಾರಗಳನ್ನು ಹುಡುಕುವ ಪ್ರಯತ್ನ ಮಾಡುತ್ತಿದ್ದೇನೆ ಎಂದರು. ಮೊದಲ ಯೋಗಿ ಆದಿಯೋಗಿ. ಅವರ 112 ಅಡಿ ಎತ್ತರದ ಮೂರ್ತಿಯನ್ನು ಚಿಕ್ಕಬಳ್ಳಾಪೂರದಲ್ಲಿ ನಿರ್ಮಿಸಲಾಗುತ್ತಿದೆ. ಜ.15 ರಂದು ಮೂರ್ತಿಯ ಉದ್ಘಾಟನೆ ನಡೆಯಲಿದೆ. ನೀವೆಲ್ಲ ಬನ್ನಿ ಎಂದು ಆಹ್ವಾನ ನೀಡಿದರು.
ಶ್ರೀ ಅಭಿನವ ಗವಿಸಿದ್ಧೇಶ್ವರ ಶ್ರೀಗಳು ಮಾತನಾಡಿ, ವಿಜಯಪುರದ ಸಿದ್ಧೇಶ್ವರ ಅಪ್ಪಾಜಿಗಳು ಸಂತರು. ನಾವು ಹಚ್ಚಿದ ದೀಪ ಆರುವ ದೀಪ. ಆದರೆ, ಅವರು ಹಚ್ಚಿದ ದೀಪ ಜ್ಞಾನದ ದೀಪ. ಅಂತಹ ಮಹಾನ್ ಸಂತನ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.

ಜಾತ್ರೆಗೆ ಚಾಲನೆ ನೀಡಿರುವ ಸದ್ಗುರು ಎರಡು ಮಹತ್ಕಾರ್ಯಗಳನ್ನು ಮಾಡಿದ್ದಾರೆ. ಒಂದು ನೂರು ದಿವಸದಲ್ಲಿ 27 ದೇಶಗಳನ್ನು ಬೈಕ್ ಮೇಲೆ ಸುತ್ತಿದ್ದಾರೆ. ಮಣ್ಣು ಮತ್ತು ಮನದ ರಕ್ಷಣೆ ಜಾಗೃತಿ ಮೂಡಿಸಿದ್ದಾರೆ. ಇಂತಹ ಮಹಾತ್ಮನಿಂದ ಜಾತ್ರೆಗೆ ಚಾಲನೆ ದೊರೆತಿರುವುದು ಸುದೈವ ಎಂದು ಶ್ರೀಗಳು ಹೇಳಿದರು. ಸಚಿವ ಆನಂದ ಸಿಂಗ್, ಶಾಸಕರಾದ ವೆಂಕಟರಾವ್ ನಾಡಗೌಡ, ಬಸವರಾಜ ದಢೇಸುಗೂರು, ಪರಣ್ಣ ಮುನವಳ್ಳಿ, ವಿಪ ಸದಸ್ಯೆ ಹೇಮಲತಾ ನಾಯಕ, ಬಳ್ಳಾರಿ ವಲಯ ಐಜಿಪಿ ಬಿ.ಎಸ್.ಲೋಕೇಶ, ಜಿಲ್ಲಾ ನ್ಯಾಯಾಧೀಶೆ ಬಿ.ಎಸ್.ರೇಖಾ ಇತರರಿದ್ದರು.


ಸಿದ್ಧೇಶ್ವರ ಶ್ರೀಗಳಿಗೆ ಗೌರವ ಸಲ್ಲಿಕೆ: ದಕ್ಷಿಣದ ಕುಂಭ ಮೇಳ ಖ್ಯಾತಿಯ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಭಾನುವಾರ ಸಾಂಗವಾಗಿ, ವಿಜೃಂಭಣೆಯಿಂದ ನೆರವೇರಿತು. ಎರಡು ವರ್ಷ ಕರೊನಾದಿಂದಾಗಿ ಸರಳ ಆಚರಣೆ ನಡೆದಿತ್ತು. ಈ ಬಾರಿ ವಿಜೃಂಭಣೆಯಿಂದ ನೆರವೇರಿತು. ಆರಂಭದಲ್ಲಿ ವಿಜಯಪುರ ಜ್ಞಾನಯೋಗಾಶ್ರಮದ ಲಿಂಗೈಕ್ಯ ಸಿದ್ಧೇಶ್ವರ ಶ್ರೀಗಳಿಗೆ ಒಂದು ನಿಮಿಷ ಮೌನ ಆಚರಣೆ ಮೂಲಕ ಗೌರವ ಸಲ್ಲಿಸಿ, ನಂತರ ರಥೋತ್ಸವ ನಡೆಸಲಾಯಿತು.